23/06/2019
ಗೌತಮ ಮಹರ್ಷಿಗಳು ತಮ್ಮ ಯೋಗ್ಯತೆ ಮೀರಿ ತಪಸ್ಸು ಮಾಡಿದ್ದು ಅವರ ತಪ್ಪು. ಅವರು ಮಾಡಿದ್ದಾರೆ. ಆ ಅಧಿಕ ತಪಸ್ಸಿನ ಪುಣ್ಯವನ್ನು ಅವರಿಂದ ಪಡೆಯುವದು ದೇವತೆಗಳ ಕರ್ತವ್ಯ. ಇದರ ಮಧ್ಯದಲ್ಲಿ ಅಹಲ್ಯೆ ಏಕೆ ಬಲಿಪಶು ಆಗಬೇಕು. ಅಹಲ್ಯೆಯೊಂದೇ ಅಲ್ಲ, ದ್ರೌಪದಿ, ಸೀತಾ, ತಾರಾ ಮುಂತಾದ ಎಲ್ಲ ಸ್ತ್ರೀಯರ ಪ್ರಸಂಗದಲ್ಲಿಯೂ ಹೀಗೇ ಆಗಿದೆ. ದುರ್ಯೋಧನನಿಗೆ ದ್ವೇಷ ಇದ್ದದ್ದು ಭೀಮನ ಮೇಲೆ, ಮಾತ್ಸರ್ಯ ಇದ್ದದ್ದು ಧರ್ಮರಾಜನ ಸಂಪತ್ತಿನ ಮೇಲೆ. ಆದರೆ ಅದಕ್ಕೆ ಬಲಿಪಶು ಆದದ್ದು ದ್ರೌಪದಿ. ರಾವಣನಿಗೆ ದ್ವೇಷ ಇದ್ದದ್ದು ರಾಮನ ಮೇಲೆ. ತಮ್ಮಂದಿರಾದ ಖರ ದೂಷಣರನ್ನು ಹಾಗೂ ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮದೇವರು ಕೊಂದರು ಎನ್ನುವ ಕಾರಣಕ್ಕೆ ಬಲಿಪಶು ಆದದ್ದು ಸೀತೆ. ಈ ರೀತಿಯ ಆಧುನಿಕರ ಪ್ರಶ್ನೆಗಳಿಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಸಿದ್ಧಾಂತ ನೀಡಿರುವ ಉತ್ತರಗಳ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ. ಇದು ಬಲಾತ್ಕಾರವೋ ವ್ಯಭಿಚಾರವೋ? ಗಂಡ ಹೆಂಡತಿಯರ ಮಧ್ಯದಲ್ಲಿ ಪರಸ್ಪರ ಸಂತೋಷದಿಂದ ಯೋಗ್ಯವಾದ ಪ್ರದೇಶ, ಯೋಗ್ಯವಾದ ಕಾಲದಲ್ಲಿ ನಡೆಯುವ ಮೈಥುನಕ್ಕೆ ವಾಮದೇವ ಯಜ್ಞ ಎಂದು ಹೆಸರು. ಭಗವಂತನ ಪೂಜಾರೂಪವಾದ ಸತ್ಕರ್ಮ. ಹೆಣ್ಣು ತಾನಾಗಿ ಅಪೇಕ್ಷೆಪಟ್ಟು ಪರಪುರುಷನೊಡನೆ ಸಂಭೋಗ ನಡೆಸಿದರೆ ಅದು ವ್ಯಭಿಚಾರ. ಹೆಣ್ಣಿಗೆ ಅಪೇಕ್ಷೆ ಇಲ್ಲದೇ ಸಂಭೋಗ ನಡೆದಲ್ಲಿ ಅದು ಬಲಾತ್ಕಾರ ಅಥವಾ ಅತ್ಯಾಚಾರ. ಆಹಲ್ಯಾದೇವಿಯರ ಪ್ರಸಂಗದಲ್ಲಿ ನಡೆದದ್ದು ಬಲಾತ್ಕಾರ ಎಂದು ಶ್ರೀಮದಾಚಾರ್ಯರೂ ನಿರ್ಣಯಿಸುತ್ತಾರೆ, ಮತ್ತು ರಾಮಾಯಣದಲ್ಲಿ ಅಹಲ್ಯೆಯ ವಚನವೂ ಇದೆ — ಅಜ್ಞಾನಾದ್ ಧರ್ಷಿತಾ ನಾಥ ತ್ವದ್ರೂಪೇಣ ದಿವೌಕಸಾ ಎಂದು. ಆದರೆ ಗೌತಮರ ರೂಪದಲ್ಲಿ ಬಂದಿರುವದು ಇಂದ್ರ ಎಂದು ತಿಳಿದೂ ಅಹಲ್ಯಾದೇವಿಯರು ಸಂಭೋಗಕ್ಕೆ ಒಪ್ಪಿಗೆ ನೀಡಿದ್ದಾರೆ. ಅಹಲ್ಯಾದೇವಿಯರ ಒಪ್ಪಿಗೆಯಿಂದಲೇ ನಡೆದಿರುವ ಮೈಥುನ ಬಲಾತ್ಕಾರ ಹೇಗಾಗಲು ಸಾಧ್ಯ? ಹಾಗಾದರೆ ಅಹಲ್ಯಾದೇವಿಯರು ಸುಳ್ಳು ಹೇಳುತ್ತಿದ್ದಾರೇನು? ಸರ್ವಥಾ ಇಲ್ಲ. ಸ್ವಯಂ ಆಚಾರ್ಯರೇ ಇದನ್ನು ಬಲಾತ್ಕಾರ ಎಂದು ನಿರ್ಣಯಿಸಿದ್ದಾರೆ. ಪ್ರಧರ್ಷಣಾದಿಂದ್ರಕೃತಾತ್ ಎಂದು. ಹಾಗಾದರೆ ಈ ತತ್ವವನ್ನು ಅರ್ಥವನ್ನು ಮಾಡಿಕೊಳ್ಳುವದು ಹೇಗೆ ಎಂಬ ಪ್ರಶ್ನೆಗೆ ಈ ಉಪನ್ಯಾಸದಲ್ಲಿ ಉತ್ತರವಿದೆ. ಭಗವಂತನ ಸಾಮ್ರಾಜ್ಯದಲ್ಲಿ ಯಾರಿಗೂ ಅನ್ಯಾಯ ನಡೆಯುವದಿಲ್ಲ ಎಂದು ಮನವರಿಕೆ ಮಾಡಿಕೊಡುವ ಭಾಗ. ತಪ್ಪದೇ ಕೇಳಿ.
Play Time: 34:37
Size: 5.51 MB