Upanyasa - VNU902

ವಿಶ್ವಾಮಿತ್ರರ ಆಗಮನ

ಶ್ರೀಮದ್ ರಾಮಾಯಣಮ್ — 20 

ಮಕ್ಕಳಿಗೆ ಮದುವೆ ಮಾಡಬೇಕು ಎಂದು ದಶರಥರು ಆಲೋಚಿಸುವಾಗಲೇ ಅಗ್ನಿಯಂತೆ ಕಂಗೊಳಿಸುತ್ತಿದ್ದ ವಿಶ್ವಾಮಿತ್ರರು ಬಂದು ಯಜ್ಞರಕ್ಷಣೆಗಾಗಿ ರಾಮಚಂದ್ರನನ್ನು ನನ್ನ ಜೊತೆ ಕಳುಹಿಸು ಎಂದು ಹೇಳುತ್ತಾರೆ. ರಾಮನಿಂದ ದೂರವಾಗುವ ಆಲೋಚನೆಯಿಂದಲೇ ಮೂರ್ಛೆಗೀಡಾಗುವ ದಶರಥಮಹಾರಾಜರು ವಿಶ್ವಾಮಿತ್ರರನ್ನು ಬೇಡಿಕೊಳ್ಳುವ ಪ್ರಸಂಗದ ವಿವರಣೆ ಇಲ್ಲಿದೆ. 

ದಶರಥ ಮಹಾರಾಜರ ಆಯುಷ್ಯ ಅರವತ್ತು ಸಾವಿರ ವರ್ಷಗಳಲ್ಲ, ಹತ್ತು ಸಾವಿರ ವರ್ಷಗಳು ಎಂಬ ಪ್ರಮೇಯದ ನಿರೂಪಣೆ ಇಲ್ಲಿದೆ. 

Play Time: 41:32

Size: 1.37 MB


Download Upanyasa Share to facebook View Comments
4174 Views

Comments

(You can only view comments here. If you want to write a comment please download the app.)
 • C Guru Raja Rao,Hyderabad

  1:06 PM , 05/04/2022

  ಆಚಾರ್ಯರೇ 🙏🏽..
  ಶ್ರೀಮದ್ರಾಮಾಯಣ...
  ತ್ರೇತಾಯುಗ ಆಯುಃ ಪರಿಮಾಣ 
  ದಶರಥರ ಆಯು..9000+ವರ್ಷಗಳು..
  ವಾಲ್ಮೇಕಿಗಳ ವಚನ.,60000ವರ್ಷಗಳ ವಿಷಯದಲ್ಲಿ....
  ವಿವರಣೆ.."ದೀರ್ಘಕಾಲ"...
  ಇದು, 60000 ಯೇ ಯಾಕೆ ಆಗಬೇಕು???
  ದಯವಿಟ್ಟು ವಿವರಿಸಬೇಕು🙏🏽🙏🏽

  Vishnudasa Nagendracharya

  ಅರವತ್ತುಸಾವಿರ ಎಂಬುದನ್ನೇ ಯಾಕಾಗಿ ಹೇಳಿದ್ದಾರೆ ಎನ್ನುವದನ್ನು ಸಂಶೋಧಿಸಬೇಕು. 
  
 • Abburu Rajeeva,Channapattana

  9:54 PM , 11/06/2020

  🙏🙏🙏
 • prema raghavendra,coimbatore

  2:42 PM , 31/05/2020

  Anantha namaskara! Danyavada!
 • Nagaraj H R,Tumkur

  9:43 PM , 08/04/2020

  ಗುರುಗಳೇ ಒಂದು ಸಂದೇಹ, ದಶರಥ ಮಹಾರಾಜರು ಇಡೀ ಭಮಂಡಲಕ್ಕೆ ಒಡೆಯರು ಎಂದಮೇಲೆ ರಾವಣನೂ ದಶರಥ ಮಹರಾಜರಿಗೆ ಕಪ್ಪ ಕಾಣಿಕೆಗಳನ್ನು ಕೊಡುತ್ತಿದ್ದರೇ? ತಿಳಿಸಿ.

  Vishnudasa Nagendracharya

  ರಾವಣ ಮೊದಲಿಗೆ ಮನುಷ್ಯ ರಾಜರ ಮೇಲೆ ಆಕ್ರಮಣ ಮಾಡುತ್ತಿರುತ್ತಾನೆ. ನಾರದರ ಮಾತಿನಂತೆ ಬಿಟ್ಟುಬಿಡುತ್ತಾನೆ. ಮತ್ತು ಕಾರ್ತವೀರ್ಯಾರ್ಜುನರಿಂದ ಉಂಟಾಗುವ ಪರಾಭವವೂ ಅದಕ್ಕೆ ಕಾರಣವಾಗುತ್ತದೆ. ಈ ಎಲ್ಲ ಇತಿಹಾಸವನ್ನು ಮುಂದೆ ಕೇಳುತ್ತೇವೆ., 
  
  ರಾವಣನ ಬಲದ ಅರಿವಿದ್ದ ರಾಜರು ಅವನ ಮೇಲೆ ಆಕ್ರಮಣ ಮಾಡುತ್ತಿರಲಿಲ್ಲ. ಮನುಷ್ಯರು ಇರುವೆಗಳನ್ನು ಎಷ್ಟು ದುರ್ಬಲ ಎಂದು ಕಾಣುತ್ತಾರೆಯೋ, ಹಾಗೆ ರಾವಣ ಮನುಷ್ಯರನ್ನು ಇರುವೆಗಳಂತೆ ಕಾಣುತ್ತಿದ್ದ. ಹೀಗಾಗಿ ಅವನು ಅವರ ಮೇಲೆ ಆಕ್ರಮಣ ಮಾಡುವದನ್ನು ನಿಲ್ಲಿಸಿದ್ದ. 
  
  ಹೀಗಾಗಿ ಎಲ್ಲ ರಾಜರೂ ರಾವಣನ ಲಂಕೆಯನ್ನು ಹೊರತು ಪಡಿಸಿ ಉಳಿದ ಭೂಭಾಗಕ್ಕೆ ಒಡೆಯರಾಗಿರುತ್ತಿದ್ದರು. 
  
  ಭೂಮಿಯ ಮೇಲೆ ಮೇರುಪರ್ವತವಿದೆ, ಶ್ವೇತದ್ವೀಪವಿದೆ. ಹೇಗೆ, ಅವನ್ನು ಹೊರತು ಪಡಿಸಿ ಉಳಿದವಕ್ಕೆ ರಾಜರಾಗುತ್ತಿದ್ದರೋ ಹಾಗೆ ಲಂಕೆಯನ್ನು ಹೊರತು ಪಡಿಸಿ ಉಳಿದವಕ್ಕೆ ಒಡೆಯರಾಗಿರುತ್ತಿದ್ದರು. 
 • Santosh Patil,Gulbarga

  10:08 PM, 11/04/2020

  Thanks Gurugale 🙏💐🙏
 • Mrudula,Hospet

  7:54 PM , 11/04/2020

  ಆಚಾರ್ಯರಿಗೆ ನನ್ನ ನಮಸ್ಕಾರಗಳು. ಆಚಾರ್ಯರೇ, ವಿಶ್ವಾಮಿತ್ರರು ತಮ್ಮ ಯಜ್ಞಕ್ಕೆ ತೊಂದರೆ ಕೊಡ್ತಿರುವಂತ ಮಾರೀಚ, ಸುಬಾಹು ಗಳ ಸಂಹಾರಕ್ಕಾಗಿ ರಾಮನನ್ನು ಕಳಿಸಲು ದಶರಥ ರಾಜನನ್ನು ಕೇಳುತ್ತಾರೆ ಅಂತ ತಿಳಿದೆವು.
  
  ಆದರೆ ಆಚಾರ್ಯರೇ, ತನ್ನ ರಾಜ್ಯದಲ್ಲಿ ಋಷಿಗಳಿಗೆ ಈ ರೀತಿಯ ಸಮಸ್ಯೆ ಇದೆ ಅಂತ ರಾಜ ತಾನಾಗಿ ತಿಳಿದು ಆ ಸಮಸ್ಯೆಯನ್ನು ಪರಿಹಾರ ಮಾಡಿದಲ್ಲಿ ಉತ್ತಮ ಆದರ್ಶವಾಗುತ್ತಿತ್ತಲ್ವ? ಇದಕ್ಕೆ ಬೇಕಾಗಿರುವ ಅನುಕೂಲತೆಗಳೂ ದಶರಥರ ರಾಜ್ಯದಲ್ಲಿದ್ದವು ಅಂತ ಆರಂಭದಲ್ಲಿ ತಿಳಿದಿದೆ (ಮಂತ್ರಿಗಳು, ಸೈನಿಕರು, ಇತ್ಯಾದಿ). 
  ವಿಶ್ವಾಮಿತ್ರರು ತಾವಾಗಿ ಬಂದು ತಿಳಿಸೋವರಿಗೆ, ದಶರಥರಿಗೆ ಪರಿಸ್ಥಿತಿ ಗೊತ್ತಿರಲಿಲ್ಲವೇ? ಇದನ್ನು ಹೇಗೆ ಅರ್ಥ ಮಾಡಿಕೋಬೇಕು?

  Vishnudasa Nagendracharya

  ಗ್ರಾಮಗಳಲ್ಲಿ, ನಗರಗಳಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣ-ವೈಶ್ಯ-ಶೂದ್ರ ಮುಂತಾದವರ ಸಮಸ್ಯೆಗಳನ್ನು ತಿಳಿದುಕೊಳ್ಳುವ ವ್ಯವಸ್ಥೆಯನ್ನು ದಶರಥ ಮಹಾರಾಜರು ಅವಶ್ಯವಾಗಿ ಮಾಡಿದ್ದರು. ಸಮಸ್ಯೆಗಳನ್ನು ತಿಳಿದುಕೊಳ್ಳಲು, ಪರಿಹರಿಸಲು ಅಧಿಕಾರಗಳು ನಿಯುಕ್ತಗೊಂಡಿರುತ್ತಿದ್ದರು. 
  
  ಆದರೆ, ಋಷಿಗಳ ಆಶ್ರಮಗಳಲ್ಲಿ ಅಥವಾ ಸಮೀಪದಲ್ಲಿ ಈ ವ್ಯವಸ್ಥೆ ಇರುತ್ತಿರಲಿಲ್ಲ. 
  
  ಇದಕ್ಕೆ ಅನೇಕ ಕಾರಣ —
  
  1. ಆಶ್ರಮಗಳು ಕಾಡಿನ ಮಧ್ಯದಲ್ಲಿರುತ್ತಿದ್ದವು. ಅಧಿಕಾರಿಗಳಿರಬೇಕೆಂದರೆ ಅವರಿಗೆ ಗ್ರಾಮದ ರೀತಿಯ ವ್ಯವಸ್ಥೆ ಆವಶ್ಯಕವಾಗಿರುತ್ತಿತ್ತು. ಕಾರಣ ಅವರು ತಪಸ್ವಿಗಳಲ್ಲ, ತಪಸ್ವಿಗಳಂತೆ ಬದುಕುತ್ತಿದ್ದರೆ ಅವರು ಅಧಿಕಾರಿಗಳಾಗುವದಿಲ್ಲ. 
  
  2. ಆಶ್ರಮದ ಸನಿಹದಲ್ಲಿ ಈ ರೀತಿ ಅಧಿಕಾರಿಗಳಿರುವದು ತಪಸ್ವಿಗಳು ಒಪ್ಪುತ್ತಿರಲಿಲ್ಲ. ನಗರ-ಗ್ರಾಮ ಜೀವನವನ್ನು ತ್ಯಜಿಸಿ, ಬೇಯಿಸಿದ ಆಹಾರವನ್ನೂ ತ್ಯಜಿಸಿ, ಗೆಡ್ಡೆ ಗೆಣಸು ಹಣ್ಣು ಹಂಪಲು ತಿಂದು ಬದುಕುವ ತಪಸ್ವಿಗಳವರು. 
  
  3. ಅಲ್ಲೇ ಇರುವದು ಬೇಡ, ತಿಂಗಳಿಗೊಮ್ಮೆ ಬಂದು ಯೋಗಕ್ಷೇಮ ವಿಚಾರಿಸುವ ವ್ಯವಸ್ಥೆ ಮಾಡಬಹುದಲ್ಲ ಎಂದು ಪ್ರಶ್ನೆ ಕೇಳಬಹುದು. ತಪಸ್ವಿಗಳಿಗೆ ನಾಗರೀಕ ಸಮಾಜದಿಂದ ದೂರವಿರುವದೇ ಉದ್ದೇಶ. ಮತ್ತೆ ಮತ್ತೆ ಭೇಟಿಗೆ ಅವರು ಅವಕಾಶ ನೀಡುತ್ತಿರಲಿಲ್ಲ. 
  
  3. ಇನ್ನು ಕಾಡಿನಲ್ಲಿರುವ ತಪಸ್ವಿಗಳು ಕಾಡು ಮೃಗ ಮುಂತಾದವುಗಳಿಂದ ಉಂಟಾಗುವ ತೊಂದರೆಯನ್ನು ಅನೇಕ ರೀತಿಯಲ್ಲಿ ತಾವೇ ಪರಿಹಾರ ಮಾಡಿಕೊಳ್ಳುತ್ತಿದ್ದರು. ತಮ್ಮ ಜಾಣ್ಮೆಯಿಂದ, ತಪಸ್ಸಿನ ಸಾಮರ್ಥ್ಯದಿಂದ. ಮತ್ತು, ಕಾಡಿನ ಪ್ರಾಣಿ, ಪಕ್ಷಿಗಳ ಮಧ್ಯದಲ್ಲಿದ್ದು ಸಾಧನೆ ಮಾಡುವದೇ ತಪಸ್ಸು. ಹೀಗಾಗಿ ಅದನ್ನು ಅವರು ರೂಢಿಸಿಕೊಳ್ಳಲೇಬೇಕು. ಇನ್ನು ಕಾಡಿನ ಮೃಗಗಳು ಅತಿಯಾದಾಗ ಕ್ಷತ್ರಿಯರು, ಕ್ಷತ್ರಿಯ ಕುಮಾರರು ಬೇಟೆಯಾಡಲು ಬಂದು ಅವನ್ನು ಸಂಹರಿಸಿ ರಕ್ಷಿಸುತ್ತಿದ್ದರು. ಈ ರೀತಿಯ ವ್ಯವಸ್ಥೆ ಇರುತ್ತಿತ್ತು. ತಪಸ್ವಿಗಳು ತಾವಾಗಿ ಕರೆದು ಮಾತನಾಡಿಸಿದರೆ ಅವರ ಆಶೀರ್ವಾದ ಪಡೆದು ಹೊರಟುಬಿಡುತ್ತಿದ್ದರು. 
  
  4. ಇನ್ನು ರಾಕ್ಷಸಾದಿಗಳಿಂದ ಉಂಟಾಗುವ ಸಮಸ್ಯೆ. ಕೆಲವು ರಾಕ್ಷಸರನ್ನು ಕ್ಷತ್ರಿಯರಿಗಿಂತ ಮಿಗಿಲಾಗಿ ತಪಸ್ವಿಗಳೇ ನಿಗ್ರಹಿಸುತ್ತಿದ್ದರು. ಋಷಿಗಳು, ಚಕ್ರವರ್ತಿಗಳಿಗಿಂತ ಯೋಗ್ಯತೆಯಲ್ಲಿಯೂ ಹಿರಿಯರು, ಶಕ್ತಿಯಲ್ಲಿಯೂ ಹಿರಿಯರು. 
  
  5. ಹೇಗೆ, ವಿಶ್ವಾಮಿತ್ರರು ಮಾರೀಚ ಸುಬಾಹುಗಳಿಗೆ ಶಾಪವನ್ನು ನೀಡುವ ಸಾಮರ್ಥ್ಯವಿದ್ದರೂ, ವ್ರತದ ನಿಯಮದ ಅನುಸಾರವಾಗಿ ಶಾಪ ನೀಡಬಾರದು ಎಂದಿದ್ದರಿಂದ, ಅವರು ದಶರಥ ಮಹಾರಾಜರ ಬಳಿ ಬಂದರೋ, ಹಾಗೆ, ಋಷಿಗಳು ತಮಗೆ ಆವಶ್ಯಕತೆ ಇದ್ದಾಗ ತಾವೇ ರಾಜರ ಬಳಿ ಬರುತ್ತಿದ್ದರು. 
  
  6. ಇನ್ನು ಈ ಪ್ರಸಂಗದಲ್ಲಿ ತಿಳಿಯಬೇಕಾದ ವಿಶಿಷ್ಟ ಕಾರಣ — ವಿಶ್ವಾಮಿತ್ರರಿಗೆ ರಾಮಚಂದ್ರನಿಗೆ ಅಸ್ತ್ರಗಳ, ಮಂತ್ರಗಳ ಸಮರ್ಪಣೆ ಮಾಡಬೇಕಾಗಿದೆ. ಅಹಲ್ಯಾ ಗೌತಮರನ್ನು ಒಂದು ಗೂಡಿಸಬೇಕಿದೆ. ಸೀತಾ ವಿವಾಹ ಮಾಡಿಸಬೇಕಿದೆ. ಅದಕ್ಕಾಗಿ ತಾವೇ ದಶರಥ ಮಹಾರಾಜರ ಮನೆಗೆ ಬರುತ್ತಾರೆ. 
 • Jayashree Karunakar,Bangalore

  5:04 PM , 08/04/2020

  ಕ್ಷತ್ರಿಯರಾಗಿದ್ದ ವಿಶ್ವಾಮಿತ್ರರು ೪೦ ಸಾವಿರ ವಷ೯ ತಪಸ್ಸು ಮಾಡಿ ಬ್ರಾಹ್ಮಣ್ಯವನ್ನು ಪಡೆದರು ಅಂತ ಹೇಳಿದಿರಿ....
  
  ಅದೇ ಜನ್ಮದಲ್ಲಿದ್ದ ಕ್ಷತ್ರಿಯ ದೇಹವು ಬ್ರಾಹ್ಮಣ ದೇಹವಾಯಿತಾ ?
  
  ಅಥವಾ ಮುಂದಿನ ಜನ್ಮದಲ್ಲಿ ಬ್ರಾಹ್ಮಣರಾಗಿ ಹುಟ್ಟಿದ್ದ ?
  
  ತಪಸ್ಸು ಮಾಡಿ ವರ ಪಡೆದಾಗ, ಆ ದೇಹಕ್ಕೆ ಮಾತ್ರ ಸೀಮಿತವಾಗಿರುತ್ತದೆಯ ಆ ರೀತಿಯಾಗಿ ಪಡೆದ ವರ ? ಮುಂದಿನ ಜನ್ಮದ ದೇಹಕ್ಕೊ ಮುಂದುವರಿಯುತ್ತಾ?

  Vishnudasa Nagendracharya

  ವಿಶ್ವಾಮಿತ್ರರು ಯಾವ ಜನ್ಮದಲ್ಲಿ ತಪಸ್ಸು ಮಾಡಿದರೋ ಅದೇ ಜನ್ಮದಲ್ಲಿಯೇ ಅವರು ಬ್ರಾಹ್ಮಣರಾದದ್ದು. ಹಾಗಾಗುವದಕ್ಕಾಗಿಯೇ ಅವರು ತಪಸ್ಸು ಮಾಡಿದ್ದು. 
  
  ವಿಶ್ವಾಮಿತ್ರರು ಸ್ವರೂಪತಃ ಬ್ರಾಹ್ಮಣರೇ. ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದ್ದರು. ಮತ್ತೆ ತಪಸ್ಸು ಮಾಡಿ ಆ ಜನ್ಮದಲ್ಲಿಯೇ ಬ್ರಾಹ್ಮಣತ್ವವವನ್ನು ಪಡೆದುಕೊಂಡರು. ಆ ಬ್ರಾಹ್ಮಣ್ಯ ಅವರಿಗೆ, ಕೇವಲ ಇತರ ಜನ್ಮಗಳಲ್ಲಿ ಅಲ್ಲ, ಮೋಕ್ಷದಲ್ಲಿಯೂ ಇರುತ್ತದೆ. 
  
 • Jayashree Karunakar,Bangalore

  11:39 AM, 09/04/2020

  ರಾಕ್ಷಸರು ಯಾವಾಗಲೂ ಬ್ರಹ್ಮ ಅಥವಾ ರುದ್ರದೇವರನ್ನೇ ಕುರಿತು ತಪಸ್ಸು ಮಾಡೋದು ಯಾಕೆ ಗುರುಗಳೆ ?

  Vishnudasa Nagendracharya

  ದೈತ್ಯರಿಗೆ ಸ್ವಾಭಾವಿಕವಾದ ಶಕ್ತಿ ಇರುವದಿಲ್ಲ. ಅವರು ತಪಸ್ಸು ಮಾಡಿ ವರವನ್ನು ಪಡೆದೇ ಶಕ್ತಿಯನ್ನು ಗಳಿಸಬೇಕು. 
  
  ಶ್ರೀಮನ್ನಾರಾಯಣ ಒಲಿಯುವದು ಪರಿಶುದ್ಧವಾದ, ನಿರ್ಮಲವಾದ, ನಿಶ್ಚಲವಾದ ಭಕ್ತಿಗೆ ಮಾತ್ರ. ಕಪಟ ಮತ್ತು ಚಂಚಲವಾದ ಭಕ್ತಿಗೆ ದೇವರು ಒಲಿಯುವದಿಲ್ಲ. ದೈತ್ಯರಿಗೆ ಆ ಭಕ್ತಿ ಇಲ್ಲವಾದ ಕಾರಣ ಅವರು ಅವರು ದೇವರನ್ನು ಕುರಿತು ತಪಸ್ಸು ಮಾಡುವುದಿಲ್ಲ. ಮತ್ತು, ಅವರಿಗಿರುವದೇ ವಿಷ್ಣುದ್ವೇಷ. ಆ ವಿಷ್ಣುದ್ವೇಷವನ್ನು ಕಾರಲಿಕ್ಕಾಗಿಯೇ ಅವರಿಗೆ ಶಕ್ತಿ ಬೇಕು. ಹೀಗಾಗಿ ವಿಷ್ಣುವಿನಲ್ಲಿ ಭಕ್ತಿಯನ್ನೂ ಮಾಡುವದಿಲ್ಲ, ವಿಷ್ಣುವಿನ ಕುರಿತು ತಪಸ್ಸೂ ಮಾಡುವದಿಲ್ಲ. 
  
  ವಿಷ್ಣುವಿನ ನಂತರ ಮಹಾಬಲವನ್ನು ಅನುಗ್ರಹಿಸುವ ಸಾಮರ್ಥ್ಯ ಉಳ್ಳವರು, ಬ್ರಹ್ಮದೇವರು, ಪ್ರಾಣದೇವರು, ರುದ್ರದೇವರು ಮತ್ತು ಇಂದ್ರಾದಿ ದೇವತೆಗಳು. 
  
  ಇದರಲ್ಲಿ ಪ್ರಾಣದೇವರೂ ಸಹಿತ ನಿರ್ಮಲ ಭಕ್ತಿಗೆ ಮಾತ್ರ ಒಲಿಯುವವರು. ಅವರ ಕುರಿತ ತಪಸ್ಸೂ ದೈತ್ಯರಿಂದ ಸಾಧ್ಯವಿಲ್ಲ. 
  
  ಇನ್ನು ಬ್ರಹ್ಮ ರುದ್ರಾದಿಗಳಿಗೆ ಪರಮಾತ್ಮನ ಆಜ್ಞೆಯಿದೆ. ದೈತ್ಯರು ತಪಸ್ಸು ಮಾಡಿದಾಗ ಅವರಿಗೆ ವರ ನೀಡಿ, ಅವರಿಂದ ತಮಸ್ಸಾಧನೆಯನ್ನು ಮಾಡಿಸಿ ಎಂದು. 
  
  ಹೀಗಾಗಿ ಬ್ರಹ್ಮ-ರುದ್ರರನ್ನು ಕುರಿತೇ ವಿಶೇಷವಾಗಿ ತಪಸ್ಸು ಮಾಡುತ್ತಾರೆ. ಪಾರ್ವತೀ, ಸ್ಕಂದ, ಗಣಪತಿಯ ವರಗಳನ್ನು ಪಡೆದ ದೈತ್ಯರೂ ಇದ್ದಾರೆ. 
  
  ಅವರಿಂದ ವರವನ್ನು ಪಡೆದು, ಲೋಕಕ್ಕೆ ಹಿಂಸೆ ಮಾಡಿ ಭಗವಂತನಿಂದ ಭಗವದ್ಭಕ್ತರಿಂದ ಹತರಾಗಿ ಹೋಗುತ್ತಾರೆ, ದೈತ್ಯರು. 
  
  ಸಜ್ಜನಿರಿಗೆ ತೊಂದರೆಯಾಗುವಂತಹ ವರಗಳನ್ನೇಕೆ ದೇವತೆಗಳು ನೀಡುತ್ತಾರೆ ಎಂಬ ಪ್ರಶ್ನೆಗೆ ತ್ರಿಪುರಾಸುರ ಸಂಹಾರದ ಉಪನ್ಯಾಸದಲ್ಲಿ ಈಗಾಗಲೇ ಉತ್ತರ ನೀಡಲಾಗಿದೆ. VNU395
  
  ಹಾಗೆಯೇ ತತ್ವಸುರಭಿಯ ಪ್ರಶ್ನೋತ್ತರದಲ್ಲಿ ಸಹ ಪ್ರಕಟಿಸಲಾಗಿದೆ. VNP018
 • Vishwnath MJoshi,Bengaluru

  7:27 PM , 09/04/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  ಶ್ರೀ ರಾಮ ನೆಂಬ ಹೆಸರಿನ ಅರ್ಥ ವನ್ನು ಕೇಳಿದೆವು. 
  ದಶರಥ ಎಂಬ ಹೆಸರಿನ ಅರ್ಥವನ್ನು ದಯವಿಟ್ಟು ತಿಳಿಸಿ ಕೊಡಿ. ಏಕೆಂದರೆ ದಶ ರಥ ಈ ಎರಡು ಶಬ್ಧಗಳಿಗೆ ರಾಮಾಯಣದಲ್ಲಿ ವಿಶೇಷ ಅರ್ಥವಿದೆ ಎಂದು ಕೇಳಿದ್ದೆನೆ.
  ದಯವಿಟ್ಟು ದಶರಥ ಹೆಸರಿನ  ಅರ್ಥ ವನ್ನು ತಿಳಿಸಿ ಕೊಡಿ ಎಂದು ಕೋರುತ್ತೇನೆ.

  Vishnudasa Nagendracharya

  ಸ್ವಯಂ ಶ್ರೀಮದಾಚಾರ್ಯರೇ ದಶರಥ ಎನ್ನುವ ಶಬ್ದದ ಅರ್ಥ ತಿಳಿಸಿದ್ದಾರೆ — ದಶದಿಗ್ರಥಾಯ ಎಂದು. ದಶರಥ ಮಹಾರಾಜರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ನೈಋತ್ಯ, ವಾಯವ್ಯ, ಈಶಾನ್ಯ, ಊರ್ಧ್ವ, ಅಧಃ ಎಂಬ ಹತ್ತೂ ದಿಕ್ಕುಗಳಲ್ಲಿ ತಮ್ಮ ರಥವನ್ನು ನಡೆಸಬಲ್ಲವರಾಗಿದ್ದರು. ಅವರ ರಥಕ್ಕೆ ಅಂತಹ ಸಾಮರ್ಥ್ಯವಿತ್ತು. ಅಂದರೆ ಅಂತರಿಕ್ಷಲೋಕಗಳಿಂದ ಆರಂಭಿಸಿ, ಕೆಳಗಿನ ಲೋಕಗಳವರೆಗೆ ಇಡಿಯ ಜಗತ್ತಿನ ಎಲ್ಲೆಡೆ ಅವರು ತಮ್ಮ ರಥದಿಂದಲೇ ಸಂಚಾರ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರಾದ ಕಾರಣ ಅವರಿಗೆ ದಶರಥ ಎಂದು ಹೆಸರಿತ್ತು. 
 • Narayanaswamy,Mysore

  12:22 PM, 10/04/2020

  ಪೂಜ್ಯ ಗುರುಗಳಿಗೆ ನಮಸ್ಕಾರಗಳು 
  ಗುರುಗಳೇ ವಸಿಷ್ಠ ಮಹರ್ಷಿಗಳು ಏಕಾಂತದಲ್ಲಿ ಭಗವಂತನಾ ಸೇವೆ ಮಾಡುವವರು ದಶರಥ ಮಹಾರಾಜರ ಅರಮನೆಯಲ್ಲಿ ಇದ್ದುಕೊಂಡು ಹೇಗೆ ಸಾಧನೆ ಮಾಡ್ತಾ ಇದ್ದರು 🙏🙏🙏🙏

  Vishnudasa Nagendracharya

  ಏಕಾಂತದಲ್ಲಿ ಭಗವದಾರಾಧನೆ ಮಾಡುವದೊಂದೇ ಸಾಧನೆಯಲ್ಲ, 
  
  ದೇವರು ಆದೇಶ ಮಾಡಿರುವ ಕರ್ತವ್ಯವನ್ನು ಪಾಲಿಸುವದೂ ಸಾಧನೆ. 
  
  ಇಕ್ಷಾಕುಕುಲಕ್ಕೆ ರಾಜಗುರುವಾಗಿರಬೇಕು ಎಂದು ವಸಿಷ್ಠರಿಗೆ ಸ್ವಯಂ ಬ್ರಹ್ಮದೇವರ ಆದೇಶವಿದೆ. ಹೀಗಾಗಿ ಅವರು ರಾಜಧಾನಿಯಲ್ಲಿದ್ದು ಸಾಧನೆ ಮಾಡುವದು ಕರ್ತವ್ಯ. ಮತ್ತು ರಾಜರೂ ಸಹ ಪ್ರಾರ್ಥನೆ ಮಾಡಿ ಅವರನ್ನು ರಾಜ್ಯದಲ್ಲಿರಿಸಿಕೊಂಡಿದ್ದಾರೆ. ಅವರ ಮೇಲಿನ ಅನುಗ್ರಹದಿಂದ ಅವರು ಅಲ್ಲಿದ್ದಾರೆ. ಆ ಕರ್ತವ್ಯಪರಿಪಾಲನೆಯ ಫಲವಾಗಿಯೇ ಅವರಿಗೆ ಶ್ರೀರಾಮಚಂದ್ರನಿಗೆ ಪುರೋಹಿತರಾಗುವ ಗುರುವಾಗುವ ಸೌಭಾಗ್ಯ ದೊರೆತದ್ದು. 
  
  ಇನ್ನು ವಸಿಷ್ಠರು ಅಯೋಧ್ಯೆಯಲ್ಲಿದ್ದರು ಎಂದರೆ ರಾಜರ ಅರಮನೆಯಲ್ಲಿಯೇ ವಾಸವಿದ್ದರು ಎಂದರ್ಥವಲ್ಲ. ಅದು ಆವಶ್ಯಕವೂ ಅಲ್ಲ. ಅಯೋಧ್ಯೆಯಲ್ಲಿಯೇ ತಪೋವನ ನಿರ್ಮಾಣಮಾಡಿಕೊಂಡು ಇದ್ದವರು. ಅಯೋಧ್ಯೆಯ ಗಡಿಯ ಆಚೆಯಲ್ಲಿಯೂ ಅವರ ಅಶ್ರಮವಿತ್ತು.