Upanyasa - VNU924

ಶ್ರೀರಾಮದೇವರ ವಿಜಯ

ಶ್ರೀಮದ್ ರಾಮಾಯಣಮ್ — 42

ಶಿವ ಧನುಷ್ಯ ಮತ್ತು ವೈಷ್ಣವ ಧನುಷ್ಯಗಳ ಚರಿತ್ರೆ, 
ಅವು ವಿಶ್ವಕರ್ಮ ನಿರ್ಮಾಣ ಮಾಡಿದ್ದೇ, ತಾವಾಗಿ ಹುಟ್ಟಿಬಂದದ್ದೆ ಎಂಬ ಚರ್ಚೆ, 
ಪ್ರಾಚೀನಕಾಲದ ಯುದ್ಧದ ನಿಯಮಗಳು
ಶಿವ-ನಾರಾಯಣರ ಕ್ರೀಡಾಯುದ್ಧದ ವರ್ಣನೆ
ನಾರಾಯಣನ ಧನುಷ್ಯ ಪರಶುರಾಮದೇವರ ಬಳಿಗೆ ಬಂದ ವಿವರ
ಕಾರ್ತವೀರ್ಯಾರ್ಜುನನ ಅಪರಾಧ, ಪರಶುರಾಮದೇವರ ವೈಭವ
ವೈಷ್ಣವಧನುಷ್ಯವನ್ನು ಹೆದೆಯೇರಿಸಿ ಬಾಣ ಹೂಡಿ ಪರಶುರಾಮರ ಮಾತಿನಂತೆ “ಲೋಕ”ಗಳನ್ನು ಸುಟ್ಟು ಹಾಕಿದ ಘಟನೆಯ ವಿವರಗಳು ಇಲ್ಲಿವೆ. 

Play Time: 39:49

Size: 1.37 MB


Download Upanyasa Share to facebook View Comments
3620 Views

Comments

(You can only view comments here. If you want to write a comment please download the app.)
 • Prahllada A M,Belupalli

  6:20 PM , 02/06/2022

  ಶ್ರೀ ಗುರುಭ್ಯೋ ನಮಃ 
  ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು ಪರಶುರಾಮ ದೇವರು ಮತ್ತು ರಾಮದೇವರು ಇಬ್ಬರೂ ನಾರಾಯಣನೇ ಅಂತ ತಿಳಿಸಿಕೊಡುವ ಮಹತ್ತರವಾದ ಉಪನ್ಯಾಸವನ್ನು ನೀಡಿದ್ದಕ್ಕೆ ಧನ್ಯವಾದಗಳು. ಲೋಕದ ದೃಷ್ಟಿಯಿಂದ ಸ್ಪರ್ಧೆ ಮಾಡಿದರೂ ರಾಮದೇವರು ಮತ್ತು ಪರಶುರಾಮ ದೇವರು ಅಭೇದ ಎಂದು ಸಜ್ಜನರಿಗೆ ತಿಳಿಸುವುದಕ್ಕೆ ಪರಶುರಾಮ ದೇವರು ರಾಮದೇವರ ಒಳಗೆ ಪ್ರವೇಶ ಮಾಡಿ ಮತ್ತು ಹೊರಬರುತ್ತಾರೆ ಎಂದು ಹೇಳಿದಿರಿ. ಆದರೆ ಪರಶುರಾಮ ದೇವರು ರಾಮ ದೇವರಿಗೆ ಪ್ರದಕ್ಷಿಣೆ ನಮಸ್ಕಾರ ಯಾತಕ್ಕೆ ಮಾಡುತ್ತಾರೆ. ಪರಶುರಾಮ ದೇವರು ರಾಮ ದೇವರಿಗಿಂತಲೂ ವಯಸ್ಸಿನಲ್ಲಿಯೂ ದೊಡ್ಡವರು ಮತ್ತು ವರ್ಣ ದಲ್ಲಿಯೂ ದೊಡ್ಡವರು ಅಲ್ವಾ ಲೋಕದೃಷ್ಟಿಯಿಂದ. ದಯವಿಟ್ಟು ತಿಳಿಸಿಕೊಡಿ.

  Vishnudasa Nagendracharya

  ಅತ್ಯುತ್ತಮ ಪ್ರಶ್ನೆ. ಇದಕ್ಕೆ ಅನೇಕ ಉತ್ತರಗಳಿವೆ — 
  
  1. ಲೋಕದ ದೃಷ್ಟಿಯಿಂದ ಇಲ್ಲಿ ಸ್ಪರ್ಧೆ ನಡೆದಿದೆ ಮತ್ತು ಸೋಲು ಗೆಲುವುಗಳೂ ಉಂಟಾಗಿವೆ. ಸೋತವರು ಗೆದ್ದವರ ಅಧೀನ. ಹೀಗಾಗಿ, ಸೋತ ಪರಶುರಾಮರು ತಾವು ಗೆದ್ದ ರಾಮದೇವರ ಅಧೀನ ಎನ್ನುವದನ್ನು ತೋರಿಸುವದಕ್ಕಾಗಿ ನಡೆದದ್ದು. 
  
  2. ಪರಶುರಾಮದ ರೂಪದ ದೇವರು ದುಷ್ಟ ಕ್ಷತ್ರಿಯರನ್ನೆಲ್ಲ ಕೊಂದೇ ಹಾಕಿದ್ದರು. ಹೀಗಾಗಿ ಸಾಮಾನ್ಯ ಜನರು ಅವರನ್ನು ಕ್ಷತ್ರಿಯದ್ವೇಷಿ ಎಂದು ತೀರ್ಮಾನಿಸುವ ಸಾಧ್ಯತೆಯುಂಟು. ನಾನು ದುಷ್ಟರಾದ ಕ್ಷತ್ರಿಯರನ್ನು ಮಾತ್ರ ಕೊಲ್ಲುತ್ತೇನೆ, ಉತ್ತಮರಾದ ಕ್ಷತ್ರಿಯರನ್ನು ಗೌರವಿಸುತ್ತೇನೆ ಎಂದು ಸೂಚಿಸುವದಕ್ಕಾಗಿ ಗೌರವ ಸಲ್ಲಿಸಿದರು. 
  
  ಆದರೂ ಬ್ರಾಹ್ಮಣ ರೂಪದಲ್ಲಿದ್ದು ಕ್ಷತ್ರಿಯರೂಪಕ್ಕೆ ನಮಸ್ಕಾರ ಸಲ್ಲಿಸಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳುವದು?
  
  3. ದೇವರು ಅವತಾರ ಮಾಡಿಬಂದಾಗ ಏಕ ಕಾಲಕ್ಕೆ ಅವತಾರದ ಧರ್ಮವನ್ನೂ ತೋರಿಸುತ್ತಾನೆ ಮತ್ತು ತನ್ನ ಮಹಿಮೆಯನ್ನೂ ಪ್ರಕಟಿಸುತ್ತಾನೆ. ಉದಾಹರಣೆಗೆ, ಶ್ರೀಕೃಷ್ಣನಾಗಿ ಅವತರಿಸಿದ ಸ್ವಾಮಿ ಲೋಕಧರ್ಮವನ್ನು ಅನುಸರಿಸಿದರೂ, ಮುಂಜಿಯಾಗುವದಕ್ಕಿಂತ ಮುಂಚೆ ಮದುವೆಯಾಗುತ್ತಾನೆ. ಮುಂಜಿಯಾಗದೇ ಮದುವೆ ಎಂಬ ಸಂಸ್ಕಾರ ಹುಟ್ಟಲು ಸಾಧ್ಯವೇ ಇಲ್ಲ. ಆದರೂ ಸ್ವಾಮಿ ಸೋದರಮಾವನ ಮಗಳು ನೀಲಾದೇವಿಯರನ್ನು ಮದುವೆಯಾಗುತ್ತಾನೆ. ಆ ಮುಖಾಂತರ ತಾನು ವಿಧಿಯನ್ನು ಅನುಸರಿಸುವದು ನಿಮಗೆ ಪಾಠ ಹೇಳಲು ಮಾತ್ರ, ನಾನು ಸ್ವರೂಪತಃ ವಿಧಿ ನಿಷೇಧಗಳಿಗೆ ಅತೀತ ಎನ್ನುವದನ್ನು ತೋರಿಸುತ್ತಾನೆ. ಹೀಗಾಗಿ, ಬ್ರಾಹ್ಮಣರು ಇತರರಿಗೆ ನಮಸ್ಕಾರ ಮಾಡುವದನ್ನು ಶಾಸ್ತ್ರ ನಿಷೇಧಿಸಿದೆ, ಸತ್ಯ. ಆದರೆ, ಆ ನಾನು ಆ ನಿಷೇಧಕ್ಕೆ ಬದ್ಧನಲ್ಲ, ಎನ್ನುವದನ್ನು ತೋರಿಸುವದಕ್ಕಾಗಿ ಹಾಗೂ ಈ ಬ್ರಾಹ್ಮಣ್ಯ, ಕ್ಷತ್ರಿಯತ್ವ ಇವೆಲ್ಲವೂ ನನ್ನ ಅನುಕರಣೆಯಷ್ಟೆ, ವಾಸ್ತವಿಕವಾಗಿ ಜನ್ಮವೇ ಇಲ್ಲದ ನನಗೆ ಜಾತಿಯೇ ಇಲ್ಲ, ಅವುಗಳಿಗೆ ಅತೀತನಾದವನು ನಾನು ಎನ್ನುವದನ್ನು ಸೂಚಿಸುವದಕ್ಕಾಗಿ ಸ್ವಾಮಿ ನಮಸ್ಕಾರ ಮಾಡುತ್ತಾನೆ. 
  
  ಹೀಗೆ ದೇವರು ಯಾವುದನ್ನು ಮನುಷ್ಯರ ದೃಷ್ಟಿಯಿಂದ ದೇವರು ಆಚರಿಸಿದ್ದಾನೆ, ಯಾವುದನ್ನು ತನ್ನ ಮಹಿಮೆ, ಅಪ್ರಾಕೃತತ್ವ, ಸ್ವಾತಂತ್ರ್ಯ ಮುಂತಾದ ಗುಣಗಳನ್ನು ತೋರಿಸಲು ಆಚರಿಸಿದ್ದಾನೆ ಎಂದು ನಾವು ವಿವೇಕದಿಂದ ಅರ್ಥ ಮಾಡಿಕೊಳ್ಳಬೇಕು. 
  
  ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಶ್ರೀ ಮಹಾಭಾರತ ತಾತ್ಪರ್ಯನಿರ್ಣಯದ ಹದಿನೆರಡನೇ ಅಧ್ಯಾಯದಲ್ಲಿ ಈ ವಿಷಯವನ್ನು ತಿಳಿಸುತ್ತಾರೆ — 
  
  स विप्रराजगोपकस्वरूपकस्तदुद्भवाः ।
तदातदा विचेष्टते क्रियाः सुरान् विशिक्षयन् ॥१२॥
  तथाऽप्यनन्यदेवतासमं निजं बलं प्रभुः ।
प्रकाशयन् पुनःपुनः प्रदर्शयत्यजो गुणान् ॥१३॥
  
  ಬ್ರಾಹ್ಮಣ, ಕ್ಷತ್ರಿಯ, ಗೋಪಾಲಕ ಮುಂತಾದ ರೂಪದಲ್ಲಿ ಕಾಣಿಸಿಕೊಳ್ಳುವ ಸ್ವಾಮಿ, ಆಯಾಯ ವರ್ಣ ಆಶ್ರಮಗಳಿಗೆ ಯೋಗ್ಯವಾದ ಕ್ರಿಯೆಗಳನ್ನು ಮಾಡುತ್ತಾನೆ, ದೇವತೆಗಳು ಮನುಷ್ಯರಾಗಿ ಅವತರಿಸಿದಾಗ ಹೀಗಿರಬೇಕು ಎಂದು ಸೂಚಿಸಲು. 
  
  ಆದರೆ, ಆಗಾಗ ಇತರ ದೇವತೆಗಳಲ್ಲಿಲ್ಲದ ತನ್ನ ಮಾಹಾತ್ಮ್ಯವನ್ನೂ ಸಹ ಆಗಾಗ ತೋರಗೊಡುತ್ತಾನೆ. 
  
  
  
  
 • Vishwnath MJoshi,Bengaluru

  10:59 AM, 10/05/2020

  श्रीगुरुभ्यो नमः। अथ गुरुपादौ नमस्करोमि
  ಗುರುಗಳ ಪಾದಗಳಿಗೆ ನಮಸ್ಕಾರ
  ಶ್ರೀ ಪರಶುರಾಮ ದೇವರಿಗೆ ಶ್ರೀ ರಾಮನು ವಿಷ್ಣು ಅವತಾರ ಎಂದು ತಿಳಿಯಲಿಲ್ಲವೆ.
  
  ತಿಳಿದಿದ್ದರು ಏಕೆ ಶ್ರೀರಾಮನನ್ನು ಅವರು ತಮ್ಮ ಧನುಷ್ಯವನ್ನು ಯೆದೆಹೇರಿಸಲು ಹೇಳಿದರು.
  ದಯವಿಟ್ಟು ತಿಳಿಸಿಕೊಡಿ 
  ಧನ್ಯವಾದಗಳು ಗುರುಗಳೆ
 • Geetha,Bangalore

  7:29 PM , 09/05/2020

  ರಾಮಾಯಣ ಉಪನ್ಯಾಸ ಬಹಳ ಸುಂದರವಾಗಿ ಮೂಡಿಬರುತ್ತಿದೆ. ಪ್ರತಿ ಪ್ರಕರಣ ನಮ್ಮ ಮುಂದೆ ನಡಿತಿರುವ ಹಾಗಿದೆ. ನೀವು ಪ್ರತಿ ಉಪನ್ಯಾಸದಲ್ಲಿ ನಾವು ಕಲಿಬೇಕಾದ ಪಾಠವನ್ನು ಮನದಟ್ ಆಗುವಹಾಗೆ ಹೇಳಿದಿರಿ. ಮಗಳಿಗೆ ತಂದೆ ಹೇಳುವ ಬುದ್ಧಿ ಮಾತು ಬಹಳ ಚೆನ್ನಾಗಿದೆ. ಅದೇ ತರಹ ಗಂಡನು ಪಾಲಿಸಬೇಕಾದ ನಿಯಮಗಳು ತಿಳಿಸಬೇಕು.
   ಪ್ರತಿ ಉಪನ್ಯಾಸವನ್ನು ಕಾತುರದಿಂದ ಪ್ರತಿಕ್ಷಿಸ್ತಿವಿ. ಅನಂತ ಧನ್ಯವಾದಗಳು.

  Vishnudasa Nagendracharya

  ಖಂಡಿತ. ಮುಂದೆ ಅಯೋಧ್ಯಾಕಾಂಡದಲ್ಲಿ ಗಂಡನ ಕರ್ತವ್ಯಗಳು, ಮಾಡಬೇಕಾದ್ದು, ಮಾಡಬಾರದ್ದು ಎಲ್ಲವೂ ಸಹ ವಿವರವಾಗಿಯೇ ಬರುತ್ತವೆ. 
 • Abhijith,Sagar

  12:07 PM, 09/05/2020

  ಪರಶುರಾಮ ದೇವರು ಬ್ರಾಹ್ಮಣರಾಗಿ ಕ್ಷತ್ರಿಯರ ಸಂಹಾರ ಹೇಗೆ ಮಾಡಿದರು, ಬ್ರಾಹ್ಮಣ ಧರ್ಮಕ್ಕೆ ವಿರುದ್ದವಲ್ಲವೇ?

  Vishnudasa Nagendracharya

  ಪರಶುರಾಮಾವತಾರದ ಉಪನ್ಯಾಸದಲ್ಲಿ ಈಗಾಗಲೇ ಉತ್ತರಿಸಿದ್ದೇನೆ. 
  
  ದುಷ್ಟರಿಂದ ಜಗತ್ತನ್ನು ಕಾಪಾಡುವದು ಕ್ಷತ್ರಿಯರ ಕರ್ತವ್ಯ. ಕ್ಷತ್ರಿಯರೇ ದುಷ್ಟರಾದಾಗ ಅವರನ್ನು ನಿಗ್ರಹಿಸುವದು ಬ್ರಾಹ್ಮಣನ ಕರ್ತವ್ಯ. ಶ್ರೀಮಟ್ಟೀಕಾಕೃತ್ಪಾದರು ನ್ಯಾಯದೀಪಿಕಾದಲ್ಲಿ (ಗೀತಾತಾತ್ಪರ್ಯನಿರ್ಣಯದ ವ್ಯಾಖ್ಯಾನ) ಹೇಳುತ್ತಾರೆ — “ಭಾಗವತಮಾತ್ರಸ್ಯ ಏತಾದೃಶನಿಗ್ರಹಃ ಪರಮೋ ಧರ್ಮಃ। ಅತ್ರೈವ ನಿಯುಕ್ತಾನಾಂ ಕ್ಷತ್ರಿಯಾಣಾಂ ವಿಶೇಷತೋಪಿ ಪರಮೋ ಧರ್ಮಃ” ಎಂದು. 
  
  ಸಾಮಾನ್ಯ ಸಂದರ್ಭದಲ್ಲಿ ಬ್ರಾಹ್ಮಣ ಶಸ್ತ್ರಧಾರಿಯಾಗಬಾರದು. ಆದರೆ ಅನಿವಾರ್ಯವಾದಾಗ ದುಷ್ಟರನ್ನು ಸಂಹರಿಸಿ ಜಗತ್ತನ್ನು ಕಾಪಾಡಲೇಬೇಕು. 
 • Jayashree Karunakar,Bangalore

  9:42 PM , 08/05/2020

  ಗುರುಗಳೆ ಶ್ರೀಮದ್ಭಾಗವತದಲ್ಲಿ ನಾವು ಕೇಳುತಿದ್ದದ್ದು, ಸೂತ -ಶೌನಕ ರೂಪದ ಸಂವಾದವನ್ನಾದರೂ, ಅಲ್ಲಲ್ಲಿ, ಶುಕಾಚಾಯ೯ರು ಹೀಗೆ ಹೇಳಿದರು, ಹಾಗೆ ಹೇಳಿದರು, ಬ್ರಹ್ಮದೇವರು ಹೇಳಿದ್ದು, ಇನ್ನೂ ಯಾರೆಲ್ಲ ಸಂವಾದವಿದೆಯೊ ,ಎಲ್ಲವನ್ನೂ ಕೇಳುತ್ತೇವೆ...
  
  ಆದರೆ ರಾಮಾಯಣದಲ್ಲಿ, 
   ಲವ-ಕುಶರು ಕಾವ್ಯವನ್ನಾಗಿ ಹಾಡುತ್ತಿರುವದನ್ನೇ ನಾವು ರಾಮಾಯಣದ ಕಥೆಯನ್ನಾಗಿ ಕೇಳುತ್ತಿದ್ದೇವೆ...ಆದರೆ ಪ್ರಾರಂಭದಲ್ಲಿ ಮಾತ್ರ ಲವ ಕುಶರು ಹೀಗೆ ಪ್ರಾರಂಭಿಸುದರು ಅಂತ ಮಾತ್ರ ಕೇಳಿದೆವು.....ಮುಂದೆ ಎಲ್ಲಾ ಕಡೆಯಲ್ಲಿಯೂ ವಾಲ್ಮೀಕಿ ಋುಷಿಗಳು ಹಾಗೆ ಹೇಳಿದರು, ಹೀಗೆ ವಣ೯ನೆ ಮಾಡಿದರು ಅಂತಾನೇ ಕೇಳುತ್ತಿದ್ದೇವೆ...ಲವ ಕುಶರ ಉಲ್ಲೇಖವೆ ಬರುತ್ತಿಲ್ಲ ಯಾಕೆ ?

  Vishnudasa Nagendracharya

  ಉತ್ತಮ ಪ್ರಶ್ನೆ. 
  
  ಶ್ರೀಮದ್ ಭಾಗವತಕ್ಕೂ ರಾಮಾಯಣಕ್ಕೂ ವ್ಯತ್ಯಾಸವಿದೆ. 
  
  ಸಮಗ್ರ ರಾಮಾಯಣವನ್ನು ಬರೆದವರು ವಾಲ್ಮೀಕಿ ಮಹರ್ಷಿಗಳು. ಅದನ್ನು ಗಾನ ಮಾಡಿದವರು ಕುಶ ಲವರು. ಹೀಗಾಗಿ ರಾಮಾಯಣ ಕುಶಲವರ ವಾಕ್ಯಗಳಲ್ಲ. 
  
  ಆದರೆ ಭಾಗವತ ಹಾಗಲ್ಲ. 
  
  ಬ್ರಹ್ಮದೇವರು ನಾರದರಿಗೆ ಉಪದೇಶ ಮಾಡಿದರು. ಇಲ್ಲಿನ ವಾಕ್ಯಗಳು ಬ್ರಹ್ಮದೇವರದು. 
  
  ಈ ಬ್ರಹ್ಮನಾರದ ಸಂವಾದವನ್ನು ಶುಕಾಚಾರ್ಯರು ಪರೀಕ್ಷಿತರಿಗೆ ಉಪದೇಶಿಸಿದರು. ಈ ಉಪದೇಶದ ಸಂದರ್ಭದಲ್ಲಿ ಬರುವ ಬ್ರಹ್ಮ ನಾರದ ವಾಕ್ಯಗಳನ್ನು ಹೊರತು ಪಡಿಸಿ ಉಳಿದ ವಾಕ್ಯಗಳು ಶುಕ-ಪರೀಕ್ಷಿತರದು. 
  
  ಈ ಶುಕ ಪರೀಕ್ಷಿತರ ಸಂವಾದವನ್ನು ಸೂತಾಚಾರ್ಯರು ಶೌನಕರಿಗೆ ತಿಳಿಸಿದರು. ಈ ಉಪದೇಶದ ಸಂದರ್ಭದಲ್ಲಿ ಬರುವ ಬ್ರಹ್ಮ ನಾರದ, ಶುಕ-ಪರೀಕ್ಷಿತರ ವಾಕ್ಯಗಳನ್ನು ಹೊರತು ಪಡಿಸಿ ಉಳಿದ ವಾಕ್ಯಗಳು ಸೂತ-ಶೌನಕರದು. 
  
  ಇವರೆಲ್ಲರ ವಾಕ್ಯಗಳ ಅಭಿಪ್ರಾಯವನ್ನು ಸುಸ್ಪಷ್ಟವಾಗಿ ಪರಿಶುದ್ಧವಾಗಿ ಸಂಗ್ರಹಿಸಿ ಶ್ಲೋಕಗಳ ರೂಪದಲ್ಲಿ ಮಾಡಿಟ್ಟವರು ವೇದವ್ಯಾಸದೇವರು. ಹೀಗಾಗಿ ಈ ಗ್ರಂಥ ವೇದವ್ಯಾಸದೇವರದು. ಅಂದರೆ, ಬ್ರಹ್ಮ-ನಾರದ, ಶುಕ-ಪರೀಕ್ಷಿತರು, ಸೂತ-ಶೌನಕರು ಶ್ಲೋಕಗಳ ರೂಪದಲ್ಲಿ ಮಾತನಾಡುತ್ತಿರಲಿಲ್ಲ. ವಾಕ್ಯಗಳ ರೂಪದಲ್ಲಿಯೇ ಮಾತನಾಡುತ್ತಿದ್ದರು. ಅವನ್ನು ಶ್ಲೋಕವಾಗಿ ಮಾಡಿದವರು ವೇದವ್ಯಾಸದೇವರು. 
  
  ಮುಂದೆ, ಸೂತ-ಶೌನಕರು ಶುಕ ಪರೀಕ್ಷಿತರು ಹೀಗೆ ಮಾತನಾಡುತ್ತಾರೆ ಎಂದು ಮೊದಲೇ ತಿಳಿದು ಅದನ್ನ ಗ್ರಥನ ಮಾಡಿದವರು ವೇದವ್ಯಾಸದೇವರು. 
  
  ಆದರೆ, ರಾಮಾಯಣ ಹಾಗಲ್ಲ. ಭಾಗವತವನ್ನು ಮುಂದಿನ ಪಂಡಿತರು ಪ್ರವಚನ ಮಾಡುವಂತೆ, ರಾಮಾಯಣವನ್ನು ಕುಶಲವರು ಗಾನ ಮಾಡಿದರಷ್ಟೆ. ಅಲ್ಲಿ ಅವರ ವಾಕ್ಯವಿಲ್ಲ. ಹೀಗಾಗಿ ಕುಶಲವರು ಹೀಗೆ ಹೇಳಿದರು ಎಂತಾಗುವದಿಲ್ಲ. 
  
  ಇಲ್ಲಿ ಮತ್ತೂ ಸೂಕ್ಷ್ಮವನ್ನು ಗಮನಿಸಬೇಕು. 
  
  ವಿಶ್ವಾಮಿತ್ರರು ಹೀಗೆ ಹೇಳಿದರು, ಜನಕರಾಜರು ಹೀಗೆ ಹೇಳಿದರು, ರಾಮ ಸೀತೆಯರು ಹೀಗೆ ಹೇಳಿದರು ಎಂದು ನಾವಿಲ್ಲಿ ಕೇಳಿಯೇ ಕೇಳುತ್ತೇವೆ. ಹೀಗೆ ಇವರೆಲ್ಲ ರಾಮಾಯಣದ ಪಾತ್ರಗಳಾಗಿ ಮಾತನಾಡುತ್ತಾರೆಯೋ ಹಾಗೆ ಸೂತ-ಶೌನಕಾದಿ ಎಲ್ಲರೂ ಬಾಗವತದ ಪಾತ್ರಗಳು. 
  
  ಮುಂದೆ ಕುಶ-ಲವರೂ ಸಹ ರಾಮಾಯಣದ ಪಾತ್ರವಾಗಿ ಮಾತನಾಡುವದನ್ನು ಕೇಳುತ್ತೇವೆ. 
  
  ಆದರೆ, ಅವರು ಮಾಡಿದ ರಾಮಾಯಣದ ಗಾನವನ್ನು ಅವರ ವಾಕ್ಯ ಎನ್ನಲಾಗುವದಿಲ್ಲ. 
 • Srikanth v,Bangalore

  12:11 PM, 08/05/2020

  ಋಚೀಕರು ಮತ್ತು ಜಮದಗ್ನಿ ಋಷಿಗಳು ವೈಷ್ಣವ ಧನುಷ್ಯ ಎತ್ತಲು ಆಗುವದಿಲ್ಲ, ಆದರೆ ಅದನ್ನು ದೇವರಿಂದ ಪಡೆದು ಮನೆಗೆ ತಂದರು ಹೇಗೆ?
  

  Vishnudasa Nagendracharya

  ಅವರಿಗೆ ಸ್ವಾಭಾವಿಕವಾಗಿ ಎತ್ತಲು ಸಾಧ್ಯವಿಲ್ಲ. ಮತ್ತು ಯುದ್ಧ ಮಾಡಲಿಕ್ಕಾಗಿ ಎತ್ತಲು ಸಾಧ್ಯವಿಲ್ಲ. ಆದರೆ, ಅದನ್ನು ನೀಡಿದ ದೇವರೇ ಪೂಜೆಗಾಗಿ ಅದನ್ನು ಎತ್ತುವ ಸಾಮರ್ಥ್ಯವನ್ನು ಅನುಗ್ರಹಿಸಿದ್ದ. 
  
  ಹೇಗೆ, ರುದ್ರದೇವರ ವರದಿಂದ ಐದು ಸಾವಿರ ಜನ ಕಿಂಕರರು ಶಿವಧನುಷ್ಯವನ್ನು ಎಳೆದು ತರುತ್ತಿದ್ದರೋ ಹಾಗೆ, ಋಚೀಕಾದಿಗಳೂ ದೇವರ ಅನುಗ್ರಹದಿಂದ ಸೀಮಿತ ಅವಧಿಯಲ್ಲಿ ಸೀಮಿತ ಕಾರ್ಯಗಳ ಸಂದರ್ಭದಲ್ಲಿ ಅದನ್ನು ಸರಿಸಬಲ್ಲವರಾಗಿದ್ದರು. 
 • Poornima Sowda,Bangalore

  9:27 PM , 08/05/2020

  ಗುರುಗಳಿಗೆ ನಮಸ್ಕಾರಗಳು. ಇವತ್ತಿನ ಪ್ರವಚನ ಕೇಳಿ ತುಂಬಾ ಸಂತೋಷವಾಯಿತು.
  ನನ್ನ ಪ್ರಶ್ನೆ, ಜನಕ ಮಹಾರಾಜರಿಗೆ ಶಿವಧನುಷ್ಯ ದೊರಕಿರುವುದು ಅರ್ಥವಾಯಿತು. ಅವರು ಕ್ಷತ್ರಿಯರು,ಧನುಷ್ಯ ಅವರ ಆಯುಧ. ಆದರೆ ರುಚೀಕ ಋಷಿಗಳು ಬ್ರಾಹ್ಮಣರು. ಭಗವಂತ ಏಕೆ ರುಚೀಕ ಋಷಿಗಳಿಗೆ ತನ್ನ ಧನುಷ್ಯವನ್ನು ಕೊಟ್ಟರು. ಹೀಗೆ ಮುಂದೆ ಇಂದ್ರ ದೇವರು ಶಾರ್ಙ್ಗ ಧನುಷ್ಯ ಅಗಸ್ತ್ಯ ಮುನಿಗಳಿಗೆ ಕೊಟ್ಟಿರುತ್ತಾರೆ. ನಂತರ ಅಗಸ್ತ್ಯ ಮುನಿಗಳು ಶ್ರೀರಾಮ ದೇವರಿಗೆ ಪೂಜೆ ಮಾಡಿ ಆ ಧನುಷ್ಯ ಕೊಡುತ್ತಾರೆ. ಭಗವಂತ ಬ್ರಾಹ್ಮಣರಿಗೆ ಧನುಷ್ಯವನ್ನು ಕೊಡಲು ಕಾರಣವೇನು?
  ಧನುಷ್ಯದಿಂದ ಮುಂದೆ ಮಹತ್ತರವಾದ ಕಾರ್ಯ ಆಗಬೇಕಾಗಿದೆಯಂತ ಅರ್ಥಮಾಡಿಕೊಳ್ಳಬೇಕಾ?
  ಮುಂದೆ ಪರಶುರಾಮ ದೇವರಿಂದ ಕ್ಷತ್ರಿಯರ ಸಂಹಾರ.
  ಶ್ರೀರಾಮ ದೇವರಿಂದ ರಾವಣನ ಸಂಹಾರ ಆಗಬೇಕಾಗಿದೆ. ಹೀಗಾಗಿ ಧನುಷ್ಯ ಬ್ರಾಹ್ಮಣರಿಗೆ ದೊರಕಿರುವುದು.
  
  ಹೀಗೆ ಅರ್ಥಮಾಡಿಕೊಳ್ಳಬೇಕಾ ಗುರುಗಳೇ.

  Vishnudasa Nagendracharya

  ಹೌದು. 
  
  ಆ ಆಯುಧಗಳನ್ನು ಪೂಜೆಯನ್ನು ಮಾಡುವದರಿಂದ, ರಕ್ಷಿಸುವದರಿಂದ ಅವರಿಗೆ ಮಹತ್ತರ ಪುಣ್ಯ ಒದಗಿ ಬರಲಿ ಎಂದು. 
 • Sampada,Belgavi

  7:34 PM , 08/05/2020

  ಹರಿಹರರ ಕ್ರೀಡಾ ಯುದ್ಧವನ್ನು ದೇವತೆಗಳು ನೋಡಬೇಕೆಂಬ ಅಪೇಕ್ಷೆಯಿಂದ ಪ್ರಾರ್ಥನೆ ಮಾಡುತ್ತಾರೆ.... ಹರಿಹರರು ಭಿನ್ನ ರಾದವರು ಒಬ್ಬರಲ್ಲ... ಬಲವೂ ಭಿನ್ನವಾದದ್ದು ಅಂತ ಜಗತ್ತಿಗೆ ದೃಷ್ಟಾಂತ ಪೂರ್ವಕವಾಗಿ ತೋರಿಸುವ ಸುಯೋಗ ವಿದು. ಭಗವಂತನ ಒಂದು ಜೋರಾದ ಹುಂಕಾರ ರುದ್ರದೇವರು ನಿಂತ ನೆಲವನ್ನೆ ಅಲುಗಾಡಿಸಿತು.ಜ್ಯಾಬಂಧನ ಮಾಡಿದ ಧನುಷ್ಯದ ಗಂಟು ಬಿಚ್ಚಿ ಧನುಷ್ಯ ಶಿಥಿಲವಾಯಿತು... ಭಗವಂತನ ಹುಂಕಾರದ ಶಬ್ದಕ್ಕೆ ಕಲ್ಲುಕಂಬ ದಂತಾಗಿ ಬಿಡುತ್ತಾರೆ ರುದ್ರದೇವರು... ಈ ಪ್ರಸಂಗ ಕೇಳಿಯೇ ಆನಂದಿಸಬೇಕು....🙏🙏 ನಿನ್ನಲ್ಲಿ ಪರಾಕ್ರಮ ಇದ್ದುದೇ ಆದರೆ ಈ ವೈಷ್ಣವ ಧನುಷ್ಯ ವನ್ನು ಹೆದೆ ಏರಿಸು ಅಂತ ಪರಶುರಾಮ ರಾಮಚಂದ್ರನಿಗೆ ಹೇಳಿದ.... ಎರಡೂ ರೂಪ ಭಗವಂತನದೇ ಇದ್ದರು... ಎಷ್ಟು ಸುಂದರ ವಿಡಂಬನೆ... ಉಪನ್ಯಾಸ ಕೇಳುತ್ತಾ ನಮ್ಮನ್ನು ನಾವೇ ಮರೆತುಬಿಡುತ್ತೇವೆ... ಅದ್ಭುತವಾದ ಉಪನ್ಯಾಸಗಳು 🙏🙏🙏🙏🙏
 • Prabhanjan Joshi,Ankola

  7:06 PM , 08/05/2020

  ಗುರುಗಳಿಗೆ ನಮಸ್ಕಾರಗಳು. 
  ಗುರುಗಳೇ ರಾಮಾಯಣ ಶ್ರವಣ ಅದ್ಬುತವಾಗಿ ನಡೆಯುತ್ತಿದೆ. ಗುರುಗಳೇ ಸ್ವಯಂವರದ ಮೂಲಕವೇ ಮದುವೆ ಮಾಡಬೇಕೆಂದು ಜನಕ ಮಹಾರಾಜರು ವೀರ್ಯ ಶುಲ್ಕವನ್ನು ಇಟ್ಟರು. ಆದರೆ ಊರ್ಮಿಳೆ, ಮಂಡೋದರಿ, ಶೃತ ಕಿರ್ತಿಯರ ಸ್ವಯಂವರ ಆಗದೆ ಮದುವೆ ಹೇಗೆ ಆಯಿತು. ದಯಮಾಡಿ ತಿಳಿಸಿ.

  Vishnudasa Nagendracharya

  ರಾಜಕುಮಾರಿಯರ ವಿವಾಹಗಳು ಸ್ವಯಂವರದಿಂದಲೇ ನಡೆಯಬೇಕೆಂಬ ನಿಯಮವಿಲ್ಲ. 
  
  ಕ್ಷತ್ರಿಯರ ವಿವಾಹ ಪದ್ಧತಿಯಲ್ಲಿ ಸ್ವಯಂವರವೂ ಒಂದು. ಸ್ವಯಂವರವೊಂದೇ ಅವರ ವಿವಾಹಪದ್ಧತಿಯಲ್ಲ. 
  
  ತಂದೆ ತಾಯಿಗಳು ಗಂಡನ್ನು ನಿರ್ಣಯಿಸಿ ಮದುವೆ ಮಾಡಿಕೊಡುವದೂ ಅವರ ಪದ್ಧತಿ. 
  
  
 • Sooraj,Udupi

  6:15 PM , 08/05/2020

  Acharyaralli Vandisikollutta, Yavude serial, upanyasagalallu ellada, Parashudari mattu Kodandapaniya Mukamukiyannu mai managalu romanchanakari aguva hage varnisutta eddiri. Yestu sari kelidaru matte matte keluva bayake, Adbutha..Vandanegalu Gurugale
 • Vikram Shenoy,Doha

  6:05 PM , 08/05/2020

  ಅತೀ ಉತ್ತಮ. ಕೋಟಿ ಧನ್ಯವಾದ ಗಳು 🙏🙏
 • Jayashree Karunakar,Bangalore

  5:25 PM , 08/05/2020

  ಚಂಡಮಾರುತವನ್ನೆಬ್ಬಿಸುತ್ತಾ ಬಂದ ಕ್ಷತ್ರಕುಲ ವಿನಾಶಕನ ಅಬ್ಬರದ ಆಗಮನದ ಕ್ಷಣವನ್ನೇ ಚಿಂತಿಸುತ್ತಾ ರಾತ್ರಿಯೆಲ್ಲ ಬೆಳಗಾಗುವುದನ್ನೇ ಕಾಯುತ್ತಾ ಕಳೆದಿದ್ದೇವೆ...
  ಕಾರುಣ್ಯದ ಭಗವಂತ ಮತ್ತೊಂದು ಸೂಯೋ೯ದಯವನ್ನು ನಮ್ಮ ಪಾಲಿಗೆ ನೀಡಿದ್ದಾನೆ,ಮತ್ತೊಮ್ಮೆ ತನ್ನ ಕಥೆಯನ್ನು ಶ್ರವಣ ಮಾಡಿ ಆಸ್ವಾದಿಸಲಿ ಅಂತ..
  
  ಭಗವಂತನ ಇಚ್ಚೆಯಿಂದಲೇ ಹುಟ್ಟಿದ ಎರಡೂ ಧನುಷ್ಯಗಳ ಕಥೆ ಬಲು ರೋಚಕ...
  ಭಗವಂತನ ಒಂದು ಹ್ಹೂಂಕಾರಕ್ಕೆ ೧೪ ಲೋಕಗಳನ್ನೇ ಧ್ವಂಸ ಮಾಡುವ ಮಹಾಸಾಮಥ್ಯ೯ದ ಮುಕ್ಕಣ್ಣನು ಸ್ತಂಭೀಭೂತರಾಗಿ ನಿಂತದ್ದು!!! ಓಹ್ ಅದೆಂತಹ ಸಾಮಥ್ಯ೯ ಭಗವಂತನದು.
   
  ರಾಮ ಪರಶುರಾಮರ ನಡುವೆ ನಡೆದ ಘಟನೆಗಳು ದಿವ್ಯಾನುಭೂತಿಯನ್ನು ನೀಡಿತು...
  ಪರಶುರಾಮರಿಂದ ಧನುಷ್ಯವನ್ನು ಪಡೆದ ರಾಮಚಂದ್ರ ಜ್ಯಾಬಂಧನ ಮಾಡುವ ಕ್ಷಣವನ್ನು....ದೇವತೆಗಳೆಲ್ಲಾ ಬೆರಗು ಕಣ್ಣುಗಳಿಂದ ನೋಡುತ್ತಿದ್ದರು ಅಂತ ನೀವು ಹೇಳುತ್ತಿದ್ದರೆ.....
  ನಾವು ಉಸಿರನ್ನು ತಡೆಹಿಡಿದು ಕೇಳುವಂತಾಯಿತು...
  
  ರಾಮಚಂದ್ರನು ಮುರಿದ ಧನುಷ್ಯದ ಶಬ್ದವನ್ನು ಕೇಳಿ ಪರಶುರಾಮ ಈಗ ಇಲ್ಲಿಗೆ ಬಂದದ್ದು....ಅದೆಂತಹ ಶಬ್ದವಾಗಿರಲಿಕ್ಕಿಲ್ಲ ಅದು ?
  ಒಂದೊಂದು ಕ್ಷಣದ ಆಸ್ವಾದನೆಯೂ ಪರಮಾದ್ಭುತವಾಗಿದೆ
  
  ಜ್ಯಾಬಂಧನವನ್ನು ಮಾಡಿ ಬಾಣವನ್ನು ಹೂಡಿ, ಹೇಳುವ ಮಾತುಗಳು
  ಅದೆಷ್ಟು ಚೆನ್ನಾಗಿದೆ
  ಪುಳಕಿತವಾಯಿತು ಮೈಮನಸ್ಸು....
  ಅದೇ ಸಂಧಭ೯ದಲ್ಲಿ 
  ವಿಶ್ವಾಮಿತ್ರರ ಆಜ್ಞೆಯನ್ನು ಪಾಲಿಸುವ ಜಗದೊಡೆಯ...ಎಲ್ಲವೂ ಹೇಳಲಸಾಧ್ಯವಾದ ಭಾವನೆಗಳುಂಟಾಗುತ್ತಿದೆ...
  
  ನಿನ್ನೆ ತಾನೇ ಚಂಡಮಾರುತವನ್ನೆಬ್ಬಿಸುತ್ತಾ ಬಂದ ಆ ಕೊಡಲಿ ರಾಮನ ಪ್ರತಾಪವನ್ನು ಕೇಳಿದ್ದೆವು, ಇದೀಗ ಅದೇ ರೂಪ , ಶ್ರೀರಾಮಚಂದ್ರನ ಮುಂದೆ ನಿಂತು ಸೋತ ಧ್ವನಿಯಲ್ಲಿ "ನೀನು ವಿಷ್ಣುವೇ" ಅಂತ ಹೇಳಿದ ಕ್ಷಣ...!!ಎನೂಂತ ಹೇಳೊದು ಮನಸ್ಸಿಗಾದ ಅನುಭವವನ್ನು ? 
  ಮಾತೇ ಬರತ್ತಿಲ್ಲ..
  ಮನಸ್ಸೆಲ್ಲಾ ರಾಮ ಪರಶುರಾಮರನ್ನೇ ತುಂಬಿಸಿಕೊಳ್ಳುತ್ತಿದೆ ಈ ಘಟನೆ...ಎಂತಹ ದಿವ್ಯವಾದ ಅನುಭವ ಮನಸ್ಸಿಗಾಗುತ್ತಿದೆ....ಕೇವಲ ಆನಂದಬಾಷ್ಪ.....
  
  ಆ ಕೊನೆಯ ಕ್ಷಣವಂತೂ ಪರಮಮಂಗಲಕರವಾಗಿದೆ... ಪರಶುರಾಮ ನೇರವಾಗಿ ಬಂದು ರಾಮನೊಳಗೆ ಪ್ರವೇಶ ಮಾಡಿ ಹೊರಗೆ ಬಂದದ್ದು!!!!!🙏
  ಇಂದಿನಭಾಗವನ್ನು ಹೇಳಲು ಯಾವ ಶಬ್ದವೂ ಸಾಲದು ಆನಂದಿಸಿಯೇ ಅನುಭವಿಸಬೇಕು...
 • deashmukhseshagirirao,Banglore

  5:47 AM , 08/05/2020

  🙏🏻🙏🏻🙏🏻🙏🏻🙏🏻🙏🏻