24/05/2020
ಶ್ರೀಮದ್ ರಾಮಾಯಣಮ್ — 66 ವನಕ್ಕೆ ಹೋಗು ಎಂದು ಕೈಕಯಿ ಹೇಳಿದ ಬಳಿಕ ರಾಮದೇವರು ರಥವನ್ನೂ ಏರುವದಿಲ್ಲ ಮತ್ತು ಛತ್ರ ಚಾಮರಗಳನ್ನೂ ದೂರ ಸರಿಸುತ್ತಾರೆ. ಅಂದ ಬಳಿಕ, ತಮ್ಮ ಮನೆಯಲ್ಲಿದ್ದ ಎಲ್ಲ ಪದಾರ್ಥಗಳನ್ನೂ ದಾನ ಮಾಡಿದ್ದು ಹೇಗೆ ಸರಿ ಎನ್ನುವ ಪ್ರಶ್ನೆಗೆ ಶ್ರೀಮದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ನೀಡಿರುವ ಉತ್ತರದ ಸಂಗ್ರಹ ಇಲ್ಲಿದೆ. ಯಾವುದೇ ಕಾರ್ಯವನ್ನು ಮಾಡಬೇಕಾದರೂ ವಿಷ್ಣುಭಕ್ತರಾದ ಬ್ರಾಹ್ಮಣರಿಗೆ, ಹಿರಿಯರಿಗೆ, ತಂದೆ ತಾಯಿಗಳಿಗೆ ವಂದಿಸಿ ಕಾರ್ಯವನ್ನು ಮಾಡಬೇಕು ಎನ್ನುವದನ್ನು ಶ್ರೀರಾಮಚಂದ್ರ ಇಲ್ಲಿ ಕಲಿಸುತ್ತಾನೆ, ಬ್ರಾಹ್ಮಣರನ್ನು ಪೂಜಿಸಿ ವನಕ್ಕೆ ತೆರಳುತ್ತೇನೆ ಅವರನ್ನು ಕರೆ ತಾ ಎಂದು ಲಕ್ಷ್ಮಣರಿಗೆ ಆದೇಶ ಮಾಡುವ ಪ್ರಸಂಗವನ್ನಿಲ್ಲಿ ನಾವು ಕೇಳುತ್ತೇವೆ. “ಅಪಿ ಪ್ರಯಾಸ್ಯಾಮಿ ವನಂ ಸಮಸ್ತಾನ್ ಅಭ್ಯರ್ಚ್ಯ ಶಿಷ್ಟಾನಪರಾನ್ ದ್ವಿಜಾತೀನ್” ಎಂದು. ಶ್ರೀರಾಮ ಸೀತಾದೇವಿಯರು ತೋರಿದ ಅದ್ಭುತ ಬ್ರಾಹ್ಮಣಭಕ್ತಿಯ ವಿವರಣೆ ಇಲ್ಲಿದೆ. ತನ್ನ ರಥವನ್ನು ಓಡಿಸುವ ಸಾರಥಿಗೆ, ಅಡಿಗೆಯವರಿಗೆ, ದ್ವಾರಪಾಲಕರಿಗೆ, ಬೆಳಗಿನ ಹೊತ್ತು ಎಬ್ಬಿಸುವ ವಂದಿ, ಮಾಗಧರಿಗೆ, ನಗಿಸುವ ವಿದೂಷಕರಿಗೆ, ಕ್ಷೌರ ಮಾಡುವ ಕ್ಷೌರಿಕರಿಗೆ, ಬಟ್ಟೆ ಒಗೆಯುವ ರಜಕರಿಗೆ, ಚಮ್ಮಾರರಿಗೆ, ಕುಂಬಾರರಿಗೆ ರಾಮದೇವರು ತಮ್ಮಲ್ಲಿದ್ದ ಸಂಪತ್ತನ್ನು ಹಂಚುತ್ತಾರೆ. ತಾವಿಲ್ಲದ ಕಾಲದಲ್ಲಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಯಾರೂ ತೊಂದರೆಯನ್ನನುಭವಿಸಬಾರದು ಎಂದು ಎಲ್ಲ ಭೃತ್ಯರಿಗೂ ಕೈತುಂಬಿ ಕೈತುಂಬಿ ನೀಡುತ್ತಾನೆ. ರಾಮ ಸೀತೆಯರೇನೋ ನಿರ್ವಿಕಾರವಾಗಿ ನೀಡುತ್ತಿದ್ದಾರೆ. ಆದರೆ ಒಡೆಯನನ್ನು ಕಳೆದುಕೊಳ್ಳುವ ದುಃಖದಲ್ಲಿ ಮುಳುಗಿ ಹೋದ ಭೃತ್ಯರ ಕುತ್ತಿಗೆ ಮೈ ತೋಯುವಷ್ಟು ಕಣ್ಣೀರು ಹರಿಯುತ್ತಿತ್ತು ಎನ್ನುವ ಮಾತು ನಮ್ಮ ಕಣ್ಣಲ್ಲಿ ನೀರನ್ನು ತುಂಬಿಸಿ ಬಿಡುತ್ತದೆ. ಮನೆಯನ್ನು ಬಹಳ ದಿವಸ ಶೂನ್ಯವಾಗಿಸಬಾರದು, ಜಮೀನಿನನಲ್ಲಿ ಬೆಳೆ ಬೆಳೆಯದೇ ಪಾಳು ಬಿಡಬಾರದು ಎಂಬ ತತ್ವವನ್ನಿಲ್ಲಿ ಕೇಳುತ್ತೇವೆ.
Play Time: 48:08
Size: 1.37 MB