Upanyasa - VNU979

ಕೌಸಲ್ಯೆಯ ದುಃಖಕ್ಕೆ ಕಾರಣ

ಶ್ರೀಮದ್ ರಾಮಾಯಣಮ್ — 90

ದಾಂಪತ್ಯದಲ್ಲಿ ಯಾವುದೇ ದುಃಖಕ್ಕೆ ಸಿಟ್ಟಿಗೆ ಆ ಸದ್ಯದ ಪರಿಸ್ಥಿತಿ ಕಾರಣವಾದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಆದರೆ ಅದಕ್ಕೆ ಹಿಂದಿನ ಯಾವುದೋ ನೋವು ಕಾರಣವಾಗಿದ್ದರೆ ಅದು ತುಂಬ ಗಂಭೀರವಾದದ್ದು. ಸುದೀರ್ಘ ಕಾಲದ ನೋವು ಸ್ಫೋಟವಾದಾದ ಅದರ ಪರಿಣಾಮವೂ ಘೋರವಾಗಿರುತ್ತದೆ. 

ಇಂತಹ ಅತೀ ಗಂಭೀರವಾದ ವಿಷಯ ದಶರಥ-ಕೌಸಲ್ಯೆಯರ ಮಧ್ಯದಲ್ಲಿಯೂ ಮೂಡಿ ಬರುತ್ತದೆ. ಸಂಬಂಧವೇ ಪೂರ್ಣ ಕಡಿದುಹೋಗುವ ಪ್ರಸಕ್ತಿ ಇರುವಾಗ ಅದನ್ನು ಉಳಿಸುವ ಮಹತ್ಕಾರ್ಯವನ್ನು ಅತ್ಯಂತ ಚಾತುರ್ಯ ಮತ್ತು ನಿಷ್ಕಪಟವಾದ ಹೃದಯದಿಂದ ಮಾಡಿದವರು ಸುಮಿತ್ರಾದೇವಿಯರು. 

ಏಕಾಂತದಲ್ಲಿ ಪತಿಯನ್ನು ಪ್ರಶ್ನಿಸುವ ಕೌಸಲ್ಯಾದೇವಿಯರು, ಮನಃಪೂರ್ವಕವಾಗಿ ಕ್ಷಮೆಯಾಚಿಸುವ ದಶರಥರು, ಯಾವಾಗ ಏನು ಮಾತನಾಡಬೇಕು ಎನ್ನುವದನ್ನು ಅದ್ಭತವಾಗಿ ಆಚರಿಸಿ ತೋರಿಸುವ ಸುಮಿತ್ರಾದೇವಿಯರು ನಮಗೆ ಬದುಕಿನ ಪಾಠವನ್ನು ಕಲಿಸುತ್ತಾರೆ. 

ಶ್ರೀಮದ್ ರಾಮಾಯಣದ ಈ ಭಾಗ ಮತ್ತು ಮುಂದಿನ ಭಾಗಗಳು ನಮ್ಮ ಬದುಕನ್ನು ಬಂಗಾರಗೊಳಿಸುವ ಶ್ರೇಷ್ಠ ಪಾಠಗಳು. 

Play Time: 37:10

Size: 3.84 MB


Download Upanyasa Share to facebook View Comments
6822 Views

Comments

(You can only view comments here. If you want to write a comment please download the app.)
 • Sowmya,Bangalore

  7:25 PM , 23/04/2022

  🙏🙏🙏
 • Shreesha Vitthala,Bangalore

  2:44 PM , 23/04/2022

  Kausalya deviyara sittu nyayasammatavagide anda mele adu satvika sitte aytu. Adu dosha hege agatte?
 • Kosigi shroff malathi,Hyderabad

  11:04 AM, 14/04/2022

  🙏🙏🙏
 • Sanjeeva Kumar,Bangalore

  1:56 PM , 12/04/2022

  ತಮ್ಮ ಪಾದಪದ್ಮಗಳಿಗೆ ಅನಂತ ಪ್ರಣಾಮಗಳು ಗುರುಗಳೆ🙏

  Vishnudasa Nagendracharya

  ಶುಭವಾಗಲಿ. 
 • Jayashree karunakar,Bangalore

  8:08 PM , 11/04/2022

  ಕೌಸಲ್ಯೆಗೆ ರಾಮ ದೇವರೆಂಬ ಜ್ಞಾನವಿದೆ ಮತ್ತು ಅವರೆಲ್ಲರೂ ಕಾಡಿನಲ್ಲಿ ದುಃಖಪಡುತ್ತಿಲ್ಲ ಅನ್ನುವದೂ ತಿಳಿದಿದೆ. 
  ಆದರೂ ಅವರನ್ನು ದುಃಖ ಕಾಡುತ್ತಿದೆ. ಗುಣಹೀನರಾದ ಕೈಕೇಯಿಯ ಚುಚ್ಚುಮಾತು ಯೋಗ್ಯತೆಯಲ್ಲಿ ಗುಣವಂತೆಯಾದ ಕೌಸಲ್ಯೆಗೆ ನೋವು ಕೊಡುತ್ತಿದೆ. 
  
  ಗಂಡಸಿಗೆ ಮೋಹ ನೀಡುವ, ಗಂಡಸಿನ ಅವನತಿಗೆ ಕಾರಣವಾಗುವ, ಶಬ್ಧವನ್ನು ಬಳಸದೆ ಸವತಿಯರಿಂದ ನೋವು ಕೊಡುವ, ಯಾರಬಳಿಯೂ ಹೇಳಿಕೊಳ್ಳಲಿಕ್ಕಾಗದ, ಹೇಳಿದರೂ ತಪ್ಪು ಕಾಣಿಸದ ಚುಚ್ಚುಮಾತುಗಳನ್ನು ಇನ್ನೊಂದು ಸಾಧ್ವಿಕ ಹೆಣ್ಣು ಕೇಳುವಂತೆ ಮಾಡುವ *ರಾಜರಿಗೆ ಬಹುಪತ್ನಿತ್ವವನ್ನು* ನಮ್ಮ ಶಾಸ್ತ್ರ ಯಾವ ಕಾರಣಕ್ಕಾಗಿ ಸಮ್ಮತಿಸಿದೆ? 
  
  
  ಮಕ್ಕಳನ್ನು ಪಡೆಯಲು ಯಜ್ಞ ಯಾಗಾದಿಗಳಿಂದಲೇ ಮಕ್ಕಳನ್ನು ಪಡೆಯಬಹುದು.. ಮಕ್ಕಳಿಗಾಗಿ ಅಲ್ಲ. ಹಾಗಾದರೆ ಏನು ಕಾರಣ ಗುರುಗಳೇ?

  Vishnudasa Nagendracharya

  ಸಮಸ್ಯೆಗೆ ಕಾರಣವಾಗಿರುವದು ಬಹುಪತ್ನಿತ್ವವಲ್ಲ. ವ್ಯಕ್ತಿಗಳಲ್ಲಿನ ದೋಷ. 
  
  ಕೌಸಲ್ಯೆ ಸುಮಿತ್ರೆಯರೂ ಸವತಿಯರೇ. ಅವರಲ್ಲಿ ಜಗಳ ಮನಸ್ತಾಪಗಳಾಗಲೇ ಇಲ್ಲ. ಕೌಸಲ್ಯಾದೇವಿಯರು ಸುಮಿತ್ರಾದೇವಿಯರನ್ನು ಕೀಳಾಗಿ ಕಾಣಲಿಲ್ಲ, ಸುಮಿತ್ರಾದೇವಿಯರು ಕೌಸಲ್ಯಾದೇವಿಯರ ವೈಭವವನ್ನು ಕಂಡು ಹೊಟ್ಟೆಕಿಚ್ಚು ಪಡಲೇ ಇಲ್ಲ. ಇಬ್ಬರೂ ಉನ್ನತ ವ್ಯಕ್ತಿತ್ವದವರು. 
  
  ಪಾಂಡವರಿಗೂ ಬಹುಪತ್ನಿಯರಿದ್ದರು. ಆ ಸವತಿಯರಲ್ಲಿ ಪರಸ್ಪರ ವಿರಸ ಕಾಡಲೇ ಇಲ್ಲ. ದ್ರೌಪದೀ ದೇವಿಯರು ರಾಜಸೂಯಸಭೆಯಲ್ಲಿ ಮಹೋನ್ನತ ಗೌರವ ಪಡೆದಾಗ ಅವರಿಗಿದ್ದು ಸುಮಾರು ಮೂವತ್ತಕ್ಕೂ ಹೆಚ್ಚಿನ ಸವತಿಯರು ಯಾರೂ ಮಾತ್ಸರ್ಯ ಪಡಲಿಲ್ಲ. ಬದಲಾಗಿ, ದ್ರೌಪದೀದೇವಿಯರು ವನವಾಸಕ್ಕೆ ತೆರಳಿದಾಗ ಅವರೆಲ್ಲರೂ ಅಪಾರ ದುಃಖಪಟ್ಟರು. ಎಲ್ಲರೂ ಉನ್ನತ ವ್ಯಕ್ತಿತ್ವದವರು. 
  
  ಸೌಭರಿ ಮಹರ್ಷಿಗಳನ್ನು ಐವತ್ತು ಜನ ಅಕ್ಕತಂಗಿಯರು ಅಪೇಕ್ಷೆ ಪಟ್ಟು ಮದುವೆಯಾಗುತ್ತಾರೆ. ಅಕ್ಕತಂಗಿಯರೇ ಈಗ ಸವತಿಯರು. ಅವರಲ್ಲಿ ವಿರಸ ಸಮಸ್ಯೆ ಮಾತ್ಸರ್ಯ ತಲೆದೋರಲೇ ಇಲ್ಲ. 
  
  ಹೀಗೆ ನೂರಾರು ದೃಷ್ಟಾಂತಗಳಿವೆ. 
  
  ಆದ್ದರಿಂದ ಸಮಸ್ಯೆಗೆ ಕಾರಣವಾಗಿರುವದು ಬಹುಪತ್ನಿತ್ವವಲ್ಲ. ವ್ಯಕ್ತಿಯಲ್ಲಿನ ದೋಷ. 
  
  ಕೈಕಯಿ ಇಲ್ಲಿ ಸವತಿಯಾಗಿ ಹಿಂಸೆ ನೀಡಿದ್ದಾಳೆ. ಆದೇ ಕೈಕಯಿ ದಶರಥರ ಮಡದಿಯಾಗದೇ ದಶರಥರ ಅಕ್ಕಳೋ-ತಂಗಿಯೋ, ತಾಯಿಯೋ ಆಗಿದ್ದರೂ ಆಗಲೂ ಸಮಸ್ಯೆ ಇದ್ದೇ ಇರುತ್ತಿತ್ತು. ಕಾರಣ, ದೋಷವಿರುವದು ಕೈಕಯಿಯಲ್ಲಿ. ಹೀಗಾಗಿ ಅವಳು ಹಿಂಸೆ ನೀಡಿಯೇ ನೀಡುತ್ತಿದ್ದಳು. 
  
  ಇನ್ನು ಬಹುಪತ್ನಿತ್ವ ಎನ್ನುವದೇ ಏಕೆ ಬೇಕು ಎಂದು ಪ್ರಶ್ನೆ ಮಾಡಬಹುದು. ಅನೇಕ ರಾಜರಿಗೆ ಅದು ಅನಿವಾರ್ಯ, ಆವಶ್ಯಕ ಸಹಿತ. ಅದರ ಕುರಿತು ತಿಳಿಯಬೇಕಾದ ವಿವರಿಸಬೇಕಾದ ಸಾಕಷ್ಟು ವಿಷಯಗಳಿವೆ. ಮುಂದೆ ಸಮಯವಾದಾಗ ವಿಸ್ತೃತ ಲೇಖನ ಬರೆಯುತ್ತೇನೆ. 
  
  ಇನ್ನು ನಿಮ್ಮ ಕಡೆಯ ಪ್ರಶ್ನೆ. ಮಕ್ಕಳನ್ನು ಯಜ್ಞಯಾಗಾದಿಗಳಿಂದ ಪಡೆಯುವದು ಎಲ್ಲರಿಗೂ ಸಾಧ್ಯವಿಲ್ಲ. ಅನೇಕ ಲಕ್ಷ ಕೋಟಿ ವರ್ಷಗಳಿಗೊಮ್ಮೆ ನಡೆಯುವ ಒಂದು ಅದ್ಭುತವದು. ಅದಕ್ಕಾಗಿ ನೂರಾರು ವರ್ಷಗಳ ತಪಸ್ಸನ್ನು ಧಾರೆಯೆರಯಬೇಕು. ಯಜ್ಞಕುಂಡದಿಂದ ದ್ರೌಪದಿ ಧೃಷ್ಟದ್ಯುಮ್ನರು ಹುಟ್ಟಿಬಂದಂತೆ. ಮತ್ತು ಆ ರೀತಿಯ ಮಕ್ಕಳನ್ನು ಪಡೆಯಲಿಕ್ಕೆ ಮಹತ್ತರ ಕಾರಣವಿರಬೇಕು. ದ್ರೌಪದೀದೇವಿಯರು ಐದು ಜನರನ್ನು ಮದುವೆಯಾಗುತ್ತಾರೆ, ಮದುವೆಯಾದ ನಂತರ ಪ್ರತೀ ದಿನವೂ ನೂತನ ಕನ್ಯೆಯಾಗಿಯೇ ಇರುತ್ತಾರೆ. ಅಂತಹ ಶಕ್ತಿ ತಂದೆತಾಯಿಗಳಿಂದ ಹುಟ್ಟಿ ಬರುವ ಮಕ್ಕಳಿಗಿರುವದಿಲ್ಲ. ಆ ರೀತಿಯಾದ ದಿವ್ಯಶರೀರವನ್ನು ಪಡೆಯಲಿಕ್ಕಾಗಿಯೇ ಜ್ಞಕುಂಡದಿಂದ ಆವಿರ್ಭವಿಸಿದರು. ಇನ್ನು ಧೃಷ್ಟದ್ಯುಮ್ನರು ಸಾಕ್ಷಾತ್ ಅಗ್ನಿಯೇ ಆದ್ದರಿಂದ, ಅಗ್ನಿಕುಂಡದಿಂದ ಹುಟ್ಟಿಬಂದರು. 
  
   ಸ್ತ್ರೀಪುರುಷರಿಂದ ಮಕ್ಕಳು ಹುಟ್ಟಿಬರುವದು ಸೃಷ್ಟಿಯ ಸಹಜ ಪ್ರಕ್ರಿಯೆ. ಸಹಜವಾಗಿ ಮಕ್ಕಳು ಹುಟ್ಟಲು ಸಾಧ್ಯವಿರುವಾಗ ಆ ಮಾರ್ಗವನ್ನು ತೊರೆದು ಮಹಾನುಭಾವರಿಗೆ ಮಾತ್ರ ಸಾಧ್ಯವಾದ ಮಾರ್ಗವನ್ನು ಅನುಸರಿಸುವದು ತಪ್ಪಾಗುತ್ತದೆ. ಬಾಯಾರಿದರೆ ಒಂದು ಲೋಟ ನೀರು ಕುಡಿದರೆ ದಾಹ ಇಂಗುತ್ತದೆ. ಮನೆಯಲ್ಲಿ ಸಹಜವಾಗಿ ದೊರೆಯವ ನೀರನ್ನು ತೊರೆದು ಪ್ರತೀಬಾರಿ ಸಾವಿರಾರು ಮೈಲು ದೂರ ಇರುವ ಗಂಗಾನದಿಗೆ ಹೋಗಿ ನೀರು ಕುಡಿದು ಮತ್ತೆ ಹಿಂತಿರುಗಬೇಕೆ?
  
  ಸ್ತ್ರೀ ಪುರುಷರಿಂದ ಸಂತಾನ ಮುಂದುವರೆಯುವದು ಭಗವಂತನೇ ಮಾಡಿರುವ ಶುದ್ಧ ವ್ಯವಸ್ಥೆ. 
  
  
 • Roopa,Bengaluru

  6:42 PM , 11/04/2022

  ಶ್ರೀ ಗುರುಭ್ಯೋ ನಮಃ
  ಗುರುಗಳೇ, ಗಂಡಸರು ತಮ್ಮ ಮನೆಯ ದುಷ್ಟ ಸ್ತ್ರೀಯರನ್ನ ಗುರುತಿಸಿ ತಿದ್ದಬೇಕು ಅಂತ ಹೇಳಿದಿರಿ. ಹೇಳಲಿಕ್ಕಾಗದ ನೋವುಗಳನ್ನು ಹೇಳದಿದ್ದರೆ ಗಂಡಸರಿಗೆ ಹೀಗೆ ತಿಳಿಯುತ್ತದೆ? ಅವರೇನು ಮಾಡಬೇಕು? 
  ತಿಳಿಸಿ ಕೊಡಿ. 🙏

  Vishnudasa Nagendracharya

  ಇದು ತುಂಬ ಸೂಕ್ಷ್ಮವಾದ ವಿಷಯ. 
  
  ಗಂಡನೋ ಮಗನೋ ತನ್ನ ಮಾತಿಗೆ ಬೆಲೆ ಕೊಡುವದಿಲ್ಲ ಎಂದರೆ ಹೆಂಡತಿ, ತಾಯಿಯರು ನೋವನ್ನು ಹೇಳಿಕೊಳ್ಳುವದೇ ಇಲ್ಲ. ಮೊದಲಿಗೆ ಮತ್ತೊಬ್ಬರ ಕಷ್ಟಕ್ಕೆ ಕಿವಿಯಾಗುವ ಗುಣವನ್ನು ಗಂಡಸು ಹೊಂದಿರಬೇಕು. 
  
  ಇನ್ನು ಕೆಲವು ಸಂದರ್ಭಗಳಲ್ಲಿ ತಾಯಿಯೋ ಹೆಂಡತಿಯೋ ನೋವನ್ನು ನುಂಗಿಕೊಂಡು, ಒಳಗೇ ದುಃಖ ಅನುಭವಿಸುತ್ತಿರುತ್ತಾರೆ. ಅವರ ಮೇಲೆ ನಿಜವಾದ ಪ್ರೇಮ ಇರುವ ಮಗ, ಗಂಡ, ಆ ನೋವನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನು ಹೊಂದಿರಬೇಕು. 
  
  ಇವೆಲ್ಲದಕ್ಕೂ ಅವನಲ್ಲಿ ಅವರ ಬಗ್ಗೆ ಗಾಢವಾದ ಗೌರವ ಪ್ರೇಮಗಳಿರಬೇಕು. ಇಲ್ಲದಿದ್ದರೆ ಈ ವಿಷಯಗಳೇ ಅವನಿಗೆ ಅರ್ಥವಾಗುವದಿಲ್ಲ. 
  
 • Laxmi Padaki,Pune

  12:43 PM, 11/04/2022

  ಸ್ತ್ರೀ ಯರ ಬಗ್ಗೆ ಚೆನ್ನಾಗಿ ಹೇಳಿದ್ದೀರಿ, ಆಚಾರ್ಯರೆ.ನಿಜ ತುಂಬಿದ ಕುಟುಂಬದಲ್ಲಿ ನಿತ್ಯವೂ ಅನುಭವಿಸಲೇಬೆಕು, ಅಂಥ ಮಾತುಗಳನ್ನು. ಇಂತಹ ಕಥೆಗಳನ್ನು ಕೇಳಿ ನಾವಾದರು ಸ್ವತಃ ಸುಧಾರಣೆ ಮಾಡಿಕೊಂಡು ಬದುಕಬೇಕು.ಅಂದರೆ ಮಾತ್ರ ಇಂತಹ ಉಪನ್ಯಾಸ ಕೇಳಿದ್ದಕ್ಕೂ ಸಾರ್ಥಕ.ಶ್ರೀ ಆಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು.🙇🙇

  Vishnudasa Nagendracharya

  ಸತ್ಯ. 
  
  ಶ್ರೀಮದ್ ರಾಮಾಯಣ ಕಲಿಸುವ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಬದುಕು ಬಂಗಾರವಾಗುತ್ತದೆ.