ತ್ರಿಪುರಾಸುರಸಂಹಾರ — 04 — ರುದ್ರವಿಜಯ
ದೇವತೆಗಳ ಪ್ರಾರ್ಥನೆಗೆ ಓಗೊಟ್ಟ ಕಾರುಣ್ಯದ ಬ್ರಹ್ಮದೇವರು ರುದ್ರದೇವರ ರಥದ ಸಾರಥ್ಯವನ್ನು ಮಾಡಲು ಒಪ್ಪುತ್ತಾರೆ. ಸಮಸ್ತದೇವತಾಮಯವಾದ ವೇದಮಯವಾದ ಆ ರಥಕ್ಕೆ ಸಾರಥಿಯಾಗಿ ಜಗತ್ತಿನ ಪಿತಾಮಹನಿರಲು ಆ ಪಾರ್ವತೀಪತಿ ರಥವನ್ನೇರಿ ತ್ರಿಪುರಗಳನ್ನು ಆ ಪುರಗಳಲ್ಲಿದ್ದ ತ್ರಿಪುರಾಸುರರನ್ನು, ಅಸಂಖ್ಯ ರಾಕ್ಷಸರನ್ನೂ ಸಂಹಾರ ಮಾಡುತ್ತಾರೆ. ಆ ಪರಮಪವಿತ್ರ ರುದ್ರವಿಜಯದ ನಿರೂಪಣೆ ಈ ಭಾಗದಲ್ಲಿದೆ, ತ್ರಿಪುರಾಸುರಸಂಹಾರದ ಶ್ರವಣದಲ್ಲಿ ನಮಗಿರಬೇಕಾದ ಅನುಸಂಧಾನದ ವಿವರಣೆಯೊಂದಿಗೆ.
ತ್ರಿಪುರಾಸುರಸಂಹಾರ — 03 — ರಥದ ನಿರ್ಮಾಣ
ಬ್ರಹ್ಮದೇವರ ಆಜ್ಞೆಯಂತೆ ದೇವತೆಗಳೆಲ್ಲರೂ ರುದ್ರದೇವರನ್ನು ತ್ರಿಪುರಾಸುರರ ಸಂಹಾರಕ್ಕಾಗಿ ಪ್ರಾರ್ಥಿಸುತ್ತಾರೆ. ವಿಶ್ವಕರ್ಮ ದೇವತೆಗಳ ಅಪೇಕ್ಷೆಯಂತೆ ಸಮಸ್ತ ದೇವತಾಮಯವಾದ ಒಂದು ಅದ್ಭುತ ರಥವನ್ನು ರುದ್ರದೇವರಿಗಾಗಿ ನಿರ್ಮಾಣ ಮಾಡುತ್ತಾನೆ. ರುದ್ರದೇವರ ಶಿವ, ದೇವದೇವ, ಪಶುಪತಿ ಮುಂತಾದ ಹೆಸರಿನ ಅರ್ಥಗಳ ವಿವರಣೆ ಹಾಗೂ ರುದ್ರರಥದ ವೈಭವವನ್ನು ಈ ಭಾಗದಲ್ಲಿ ಕೇಳುತ್ತೇವೆ.
ತ್ರಿಪುರಾಸುರ ಸಂಹಾರ — 2 — ಪುರಗಳ ನಿರ್ಮಾಣ
ವರವನ್ನು ಪಡೆದ ತ್ರಿಪುರಾಸುರರು ಮಯಾಸುರನ ಬಳಿಗೆ ಬಂದು ಮೂರು ಊರುಗಳನ್ನು ನಿರ್ಮಾಣ ಮಾಡಲು ಹೇಳುತ್ತಾರೆ. ಮಯಾಸುರ ತಾನೂ ತಪಸ್ಸಿನ ಆಚರಣೆ ಮಾಡಿ ವಿಶೇಷ ಶಕ್ತಿಯನ್ನು ಗಳಿಸಿ ಬಂಗಾರ, ಬೆಳ್ಳಿ, ಕಬ್ಬಿಣಗಳ ಮೂರು ಅದ್ಭುತ ಊರುಗಳನ್ನು ನಿರ್ಮಾಣ ಮಾಡುತ್ತಾನೆ. ತಾರಕಾಕ್ಷನ ಮಗ ಹರಿ ಎನ್ನುವ ದೈತ್ಯ ಬ್ರಹ್ಮದೇವರ ಕುರಿತು ತಪಸ್ಸು ಮಾಡಿ ಸತ್ತವರನ್ನು ಬದುಕಿಸುವ ಒಂದು ಕೆರೆಯನ್ನು ನಿರ್ಮಾಣ ಮಾಡುತ್ತಾನೆ. ಹೀಗೆ ಐಶ್ವರ್ಯ, ಶಕ್ತಿಗಳಿಂದ ಯುಕ್ತರಾದ ದೈತ್ಯರು ಸಜ್ಜನರನ್ನು ಹಿಂಸಿಸಲು ತೊಡಗಿದಾಗ ಇಂದ್ರದೇವರು ಅವರ ಮೇಲೆ ಯುದ್ಧ ಸಾರುತ್ತಾರೆ. ಆದರೆ ಬ್ರಹ್ಮದೇವರ ವರದ ರಕ್ಷೆಯಿದ್ದ ಅವರನ್ನು ಗೆಲ್ಲಲಾಗುವದಿಲ್ಲ. ನಂತರ ಬ್ರಹ್ಮದೇವರ ಆಜ್ಞೆಯಂತೆ ಸಮಸ್ತ ದೇವತೆಗಳೂ ಮಹಾರುದ್ರದೇವರ ಬಳಿ ಬಂದು ತ್ರಿಪುರಗಳ ಮತ್ತು ತ್ರಿಪುರಾಸುರರ ಸಂಹಾರಕ್ಕಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಘಟನೆಗಳ ಚಿತ್ರಣ ಈ ಭಾಗದಲ್ಲಿದೆ.
ತ್ರಿಪುರಾಸುರಸಂಹಾರ — 1 — ತ್ರಿಪುರಾಸುರರಿಗೆ ವರ
ತ್ರಿಪುರಾಸುರಸಂಹಾರದ ಕುರಿತು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ನೀಡಿರುವ ನಿರ್ಣಯಗಳೊಂದಿಗೆ ಉಪನ್ಯಾಸ ಆರಂಭವಾಗುತ್ತದೆ. ತಾರಕಾಸುರನಿಗೆ ಮೂರು ಜನ ಮಕ್ಕಳು — ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲೀ ಎಂದು. ಮೂರೂ ಜನರು ಘೋರ ತಪಸ್ಸನ್ನು ಮಾಡಿ ಬ್ರಹ್ಮದೇವರಿಂದ ಮೂರು ಅಭೇದ್ಯವಾದ ಊರುಗಳನ್ನು ನಿರ್ಮಾಣ ಮಾಡಿಕೊಳ್ಳುವ ವರವನ್ನು ಪಡೆದುಕೊಳ್ಳುತ್ತಾರೆ. “ದೇವತೆಗಳಿಗೆ ಬುದ್ಧಿಯಿಲ್ಲ, ತಾವೇ ರಾಕ್ಷಸರಿಗೆ ವರ ಕೊಡುತ್ತಾರೆ. ಆ ನಂತರ ಅದೇ ವರದಿಂದ ರಾಕ್ಷಸರು ದೇವತೆಗಳಿಗೆ ತೊಂದರೆ ಕೊಡುತ್ತಾರೆ. ಮತ್ತೆ ದೇವತೆಗಳು ಏನೋ ತಂತ್ರ ಮಾಡಿ ಅವರನ್ನು ಕೊಲ್ಲುತ್ತಾರೆ. ಒಟ್ಟಾರೆ ಈ ಪುರಾಣಗಳು ಕಾಗಕ್ಕ ಗುಬ್ಬಕ್ಕಗಳ ಕಟ್ಟು ಕಥೆ” ಎಂದು ಇಂದಿನವರು ಮಾಡುವ ಆಕ್ಷೇಪಕ್ಕೆ ಶ್ರೀಮದಾಚಾರ್ಯರ ಸಿದ್ಧಾಂತ ನೀಡಿರುವ ಯುಕ್ತಿಯುಕ್ತವಾದ ಅದ್ಭುತವಾದ ಉತ್ತರವನ್ನು ನಾವಿಲ್ಲಿ ಕೇಳುತ್ತೇವೆ. ಸಾಧನಜೀವನದ ಅದ್ಭುತ ಸಂವಿಧಾನದ ಚಿತ್ರಣದೊಂದಿಗೆ. ತಪ್ಪದೇ ಕೇಳಿ.