ಅಜಾಮಿಳನ ಕಥೆ
ಅಜಾಮಿಳನ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಹತ್ತಾರು ಜನ ಹೇಳಿರಬಹುದು. ಆದರೆ ಶ್ರೀ ಕನಕದಾಸಾರ್ಯರ ವಾಣಿಯಲ್ಲಿ ಬರುವ ಕಥೆಯ ನಿರೂಪಣೆಯೇ ಅದ್ಭುತ. ನಮ್ಮ ಮನಸ್ಸು ಚೈತನ್ಯಗಳ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರುವ ಅವರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಹನುಮನ ಭಾಗ್ಯ
ದೇವರು ಕೇವಲ ಕರ್ಮದ ಅನುಸಾರವಾಗಷ್ಟೇ ಅಲ್ಲ, ಸ್ವಭಾವದ ಅನುಸಾರವಾಗಿಯೂ ಫಲ ನೀಡುತ್ತಾನೆ, ಸ್ವಭಾವ ಅಧಿಕವಾದಷ್ಟೂ ಫಲ ಅಧಿಕವಾಗುತ್ತದೆ ಎಂಬ ತತ್ವವನ್ನು ಹನುಮಂತದೇವರ ಮೇಲೆ ಪರಮಾತ್ಮ ಮಾಡಿದ ಪರಮಾನುಗ್ರಹದ ಚಿತ್ರಣದ ಮುಖಾಂತರ ಶ್ರೀ ಕನಕದಾಸಾರ್ಯರು ಪ್ರತಿಪಾದಿಸುತ್ತಾರೆ. ಆ ತತ್ವದ ವಿವರಣೆ ಇಲ್ಲಿದೆ.
ವಿಭೀಷಣಪಾಲ
ಒಬ್ಬ ಮನುಷ್ಯನಿಗೆ ಮತ್ತೊಬ್ಬನು ತೊಂದರೆ ಮಾಡಿದರೆ ತೊಂದರೆ ಮಾಡಿದವನ ಇಡಿಯ ಕುಲವನ್ನು ಮನುಷ್ಯರು ದೂರ ಇಡುತ್ತಾರೆ, ದ್ವೇಷ ಮಾಡುತ್ತಾರೆ. ಅಂತಹುದರಲ್ಲಿ ತನ್ನ ಹೆಂಡತಿಯನ್ನೇ ಅಪಹಾರ ಮಾಡಿದ ರಾವಣನ ತಮ್ಮನನ್ನು ತನ್ನವನ್ನಾಗಿ ಭಗವಂತ ಸ್ವೀಕಾರ ಮಾಡಿದ, ಹೀಗಾಗಿ “ಎಷ್ಟು ಮಾಡಿದರೇನು ಮುನ್ನ ತಾ ಪಡೆಯವಷ್ಟೆಯೆಂಬುದ ಲೋಕದೊಳು ಮತಿಗೆಟ್ಟ ಮಾನವಾರುಡುತಿಹರು” ಎಂಬ ಜನರ ಆಕ್ಷೇಪ ಹುರುಳಿಲ್ಲದ್ದು. ನಮ್ಮ ಸ್ವಾಮಿಗೆ ಮನುಷ್ಯರ ಹೋಲಿಕೆ, ಧಣಿಗಳ ಹೋಲಿಕೆ ಸಲ್ಲ ಎಂಬ ತತ್ವವನ್ನು ಶ್ರೀ ಕನಕದಾಸಾರ್ಯರು ಇಲ್ಲಿ ನಿರೂಪಿಸುತ್ತಾರೆ. ಶ್ರೀಮನ್ನಾರಾಯಣಪಂಡಿತಾಚಾರ್ಯರ ಸಂಗ್ರಹರಾಮಾಯಣದ ವಚನಗಳ ಉಲ್ಲೇಖದೊಂದಿಗೆ ಇಲ್ಲಿ ವಿಭೀಷಣಮಹಾರಾಜರ ಕಥೆಯ ನಿರೂಪಣೆಯಿದೆ.
ಭ್ರಮರಕೀಟನ್ಯಾಯ
ಭ್ರಮರಕೀಟನ್ಯಾಯದಂದದಲಿ ನಮ್ಮನು ರಕ್ಷಿಸು ಎಂದು ಶ್ರೀ ಕನಕದಾಸಾರ್ಯರು ಆದಿಕೇಶವನನ್ನು ಬೇಡಿದ್ದಾರೆ. ಈ ಭ್ರಮರಕೀಟನ್ಯಾಯ ಎನ್ನುವದು ದೇವರಿಗೂ ಜೀವರಿಗೂ ಇರುವ ಸಂಬಂಧವನ್ನು ಅದ್ಭುತವಾಗಿ ನಿರೂಪಿಸುವ ಒಂದು ದೃಷ್ಟಾಂತ. ನಾವು ಯಾರು, ನಾವು ಹೇಗೆ ಸಾಧನೆ ಮಾಡಬೇಕು ಎನ್ನುವದನ್ನು ಕಲಿಸುವ, ಬಸವಳಿದು ನಿಂತವರನ್ನು ಹುರಿದುಂಬಿಸುವ ಈ ಅದ್ಭುತ ಭ್ರಮರಕೀಟನ್ಯಾಯದ ಕುರಿತ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ.
ವಾಲ್ಮೀಕಿ ಋಷಿಗಳ ಕಥೆ
ಶ್ರೀ ವಾಲ್ಮೀಕಿ ಋಷಿಗಳನ್ನು ಭಗವಂತ ಉದ್ಧಾರ ಮಾಡಿದ ರೋಮಾಂಚಕಾರಿ ಇತಿಹಾಸದ ನಿರೂಪಣೆ. ನೀವೂ ಕೇಳಿ. ನಿಮ್ಮ ಮಕ್ಕಳಿಗಂತೂ ತಪ್ಪದೇ ಕೇಳಿಸಿ.
ಒಬ್ಬ ಧಣಿಗೂ ದೇವರಿಗೂ ಏನು ವ್ಯತ್ಯಾಸ?
ಫಲ ನೀಡಲಿಕ್ಕಾಗದ ಕರ್ಮಗಳಿಗೆ ಭಗವಂತ ಫಲ ನೀಡುತ್ತಾನೆ ಎನ್ನುವದನ್ನು ಬಿಟ್ಟರೆ ಮತ್ತೇನು ದೊಡ್ಡಸ್ತಿಕೆ ದೇವರಲ್ಲಿದೆ ? “ಎಷ್ಟು ಮಾಡಿದರೇನು ಮುನ್ನ ತಾ ಪಡೆವಷ್ಟೆ” ನಾವು ಮಾಡಿದ ಕರ್ಮಕ್ಕಷ್ಟೇ ಫಲ ಪಡೆಯಲು ಸಾಧ್ಯ. ದುಡಿಸಿಕೊಂಡು ಸಂಬಳ ನೀಡುವ ಒಬ್ಬ ಧಣಿಗೂ, ದೇವರಿಗೂ ಏನೂ ವ್ಯತ್ಯಾಸ ಉಳಿಯಲಿಲ್ಲ ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಅದ್ಭುತವಾದ ಮೂರು ಉತ್ತರಗಳನ್ನು ನೀಡಿದ್ದಾರೆ. ಕೇಳಿ ಆಸ್ವಾದಿಸಿ.
ಸಂಕಲ್ಪ ಸಮರ್ಪಣೆ ಏಕೆ ಬೇಕು?
ನಮ್ಮಿಂದ ಕರ್ಮ ಮಾಡಿಸುವವನು ದೇವರೇ, ಅವನಿಗೆ ತಿಳಿಯದ್ದು ಯಾವುದೂ ಇಲ್ಲ. ಅಂದ ಮೇಲೆ ಸಂಕಲ್ಪ ಏಕೆ ಮಾಡಬೇಕು, ಸಮರ್ಪಣೆ ಏಕೆ ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ನಮ್ಮ ಆದಿಕೇಶವನ ದಾಸರಾದ ಶ್ರೀ ಕನಕದಾಸಾರ್ಯರು ನಮ್ಮ ಮನಸ್ಸಿನಲ್ಲಿ ನಾಟಿ ಉಳಿಯುವಂತಹ ಅದ್ಭುತ ಉತ್ತರವನ್ನು ನೀಡಿದ್ದಾರೆ. ಕೇಳಿ ಅಸ್ವಾದಿಸಿ.
ಗೋಪೀ-ಕೃಷ್ಣರ ಶೃಂಗಾರ
“ಬಗೆಬಗೆಯ ರತಿಕಲೆಯಲಿ ಕೂರುಗುರ ನಾಟಿಸಿ ಈ ಜಗಕೆ ಪಾವನನಾದೆ” ಎನ್ನುತ್ತಾರೆ ಶ್ರೀ ಕನಕದಾಸಾರ್ಯರು. ಭಗವಂತನೆಡೆಗೆ ನಮಗಿರುವ ಭಕ್ತಿಯನ್ನು ನೂರ್ಮಡಿ ಮಾಡುವ ಭಾಗ, ದೇವರ ಮಹಾಮಾಹಾತ್ಮ್ಯವನ್ನು ನಮಗೆ ಪರಿಚಯಿಸುವ ಭಾಗ ಗೋಪಿಕಾ-ಕೃಷ್ಣರ ರಾಸಲೀಲೆಯ ಪ್ರಸಂಗ. ಗೋಪಿಗೀತೆಯ ಅನೇಕ ಪದ್ಯಗಳ ಅರ್ಥಾನುಸಂಧಾನವೂ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಕೃಷ್ಣ ಕರ್ಣನನ್ನು ಪಾಂಡವರ ಪಾಳೆಯಕ್ಕೆ ಕರೆದದ್ದು ಸರಿಯೇ?
ಕರ್ಣ ಹಿಂದೆ ಸುಗ್ರೀವನಾಗಿದ್ದಾಗ ಮಾಡಿದ ಪಾಪಕ್ಕೆ ಶ್ರೀಕೃಷ್ಣ ಶಿಕ್ಷೆಯನ್ನು ನೀಡುತ್ತಿದ್ದಾನೆ, ಸರಿ. ಆದರೆ, ಅವನನ್ನು “ಕೊಲ್ಲ ಬಗೆದವನಗಾಗಿ” ಪಾಂಡವರ ಪಾಳೆಯಕ್ಕೆ ಬಾ ಎಂದು ಕರೆದದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಅದ್ಭುತವಾದ ಉತ್ತರವನ್ನು ನೀಡಿದ್ದಾರೆ, ತಪ್ಪದೇ ಕೇಳಿ. ದೇವರ ಶರಣಾಗತಿಯಿಂದ ದೊರೆಯುವ ಫಲವೇನು ಎನ್ನುವದನ್ನು ಅತ್ಯದ್ಭುತವಾಗಿ ಶ್ರೀ ಕನಕದಾಸಾರ್ಯರು ಇಲ್ಲಿ ನಿರೂಪಿಸಿದ್ದಾರೆ.
ಪಾಪ ಕಳೆದುಕೊಳ್ಳದೇ ಉದ್ಧಾರವಿಲ್ಲ
ಸಾಕಷ್ಟು ಕೆಟ್ಟ ಕೆಲಸಗಳನ್ನು ಮೊದಲು ಮಾಡಿದ ವ್ಯಕ್ತಿ, ಆ ನಂತರ ದಲ್ಲಿ ಒಳ್ಳೆಯ ಮಾರ್ಗದಲ್ಲಿ ಬಂದ ಮಾತ್ರಕ್ಕೆ ಅವನಿಗೆ ಎಲ್ಲವೂ ಒಳ್ಳೆಯದೇ ಆಗುವದಿಲ್ಲ, ಹಿಂದೆ ಮಾಡಿದ ಪಾಪದ ಪ್ರಕ್ಷಾಲನೆಯನ್ನು ಮಾಡಿಕೊಳ್ಳದೇ ಅವನಿಗೆ ದುಃಖ ತಪ್ಪಿದ್ದಲ್ಲ ಎನ್ನುವ ಮಹತ್ತ್ವದ ಪ್ರಮೇಯದ ಚಿಂತನೆ ಇಲ್ಲಿದೆ. ಕರ್ಣ ಮಹಾಭಾರತದ ದುರಂತ ನಾಯಕ. ಅವನ ಆ ರೀತಿಯ ಬದುಕಿಗೆ ಕಾರಣವೇನು ಎನ್ನುವದನ್ನು ತಿಳಿಯಲು ಅವನ ಹಿಂದಿನ ಜನ್ಮವಾದ ಸುಗ್ರೀವನ ಜನ್ಮದ ಚರ್ಯೆಗಳ ಚಿಂತನೆ ಇಲ್ಲಿದೆ. ಸುಗ್ರೀವನ ಜೀವನ ಅರ್ಥವಾದರೆ ಕರ್ಣನ ಜೀವನ ನಮಗರ್ಥವಾಗುತ್ತದೆ ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ. ಸುಗ್ರೀವನ ಜೊತೆಯಲ್ಲಿ ಶ್ರೀರಾಮಚಂದ್ರನೇ ಇದ್ದರೂ ಸಹ ಅವನು ಹೇಗೆ ತಪ್ಪು ಮಾಡಲು ಸಾಧ್ಯ? ಮಾಡಿದ್ದು ತಪ್ಪಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ತಪ್ಪದೇ ಕೇಳಿ.
ಸೋದರಳಿಯನನ್ನೇ ಕಾಪಾಡದ ದೇವರನ್ನು ನಂಬಬೇಕೆ?
ದೇವರು ಸರ್ವಪ್ರಕಾರದಲ್ಲಿಯೂ ನಮ್ಮನ್ನು ರಕ್ಷಿಸುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಅಭಿಮನ್ಯುವಿಗೆ ಸೋದರಮಾವನಾಗಿಯೂ ಶ್ರೀಕೃಷ್ಣ ಅವನನ್ನು ರಕ್ಷಿಸಲಿಲ್ಲ. ಅಂದಮೇಲೆ ದೇವರನ್ನು ನಂಬಬೇಕೇಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಅಭಿಮನ್ಯುವಿನ ಪ್ರಸಂಗ
ಕುರುಕ್ಷೇತ್ರಯುದ್ಧದಲ್ಲಿನ ಒಂದು ಮನಕಲಕುವ ಘಟನೆ ಅಭಿಮನ್ಯುವಿನ ಮರಣ. ಶ್ರೀ ಕನಕದಾಸಾರ್ಯರು “ಅಭಿಮನ್ಯುವನು ಕೊಲ್ಲಿಸಿದೆ ಕೊಳಗುಳದಿ” ಎಂದು ಶ್ರೀಕೃಷ್ಣನೇ ಅಭಿಮನ್ಯುವಿನ ಮರಣಕ್ಕೆ ಕಾರಣ ಎನ್ನುತ್ತಾರೆ. ಈ ಮಾತಿನ ಅಭಿಪ್ರಾಯದ ವಿವರಣೆಯೊಂದಿಗೆ, ಅಭಿಮನ್ಯುವಿನ ಮರಣ ಮತ್ತು ಸುಭದ್ರೆಯನ್ನು ಶ್ರೀಕೃಷ್ಣ ಸಾಂತ್ವನಗೊಳಿಸಿದ ರೀತಿಯ ವಿವರಣೆ ಇಲ್ಲಿದೆ. ಅಭಿಮಾನತ್ಯಾಗ ಮಾಡಬೇಕು ತತ್ವವನ್ನು ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ್ದ. ಆ ಅಭಿಮಾನತ್ಯಾಗದ ತತ್ವವನ್ನು ಈಗ ತನ್ನ ತಂಗಿಯಿಂದಲೇ ಅನುಷ್ಠಾನ ಮಾಡಿಸಬೇಕಾದ ಕರ್ತವ್ಯ ಶ್ರೀಕೃಷ್ಣನಿಗೊದಗಿ ಬರುತ್ತದೆ. ಭಗವಂತ ಅದನ್ನು ಯಾವ ರೀತಿ ಮಾಡಿದ ಎನ್ನುವದರ ವಿವರಣೆ ಇಲ್ಲಿದೆ. ಈ ವಿಷಯ ಮುಂದಿನ ಉಪನ್ಯಾಸಕ್ಕೂ ಮುಂದುವರೆಯುತ್ತದೆ.
ಕುರುಕ್ಷೇತ್ರ ಯುದ್ಧದ ಒಂದು ವಿಚಿತ್ರ ಘಟನೆ
ಪರ್ಣಾಶಾ ಎಂಬ ನದಿಯ ಮತ್ತು ವರುಣನ ಮಗ ಶ್ರುತಾಯುಧ ಎಂಬ ರಾಜ. ಅವನ ಬಳಿ ಒಂದು ಅದ್ಭುತವಾದ ಗದೆಯಿರುತ್ತದೆ. ಯುದ್ಧದಲ್ಲಿ ಅರ್ಜುನನಿಂದ ಬಸವಳಿದು ಹೋದ ಶ್ರುತಾಯುಧ ತನ್ನ ಗದೆಯನ್ನು ತೆಗೆದುಕೊಂಡು ಬಂದು ಅರ್ಜುನನ ರಥವೇರಿ ಅರ್ಜುನನನ್ನು ಹೊಡೆಯುವ ಬದಲು ಶ್ರೀಕೃಷ್ಣನನ್ನು ಹೊಡೆಯುತ್ತಾನೆ. ಆಗ ಆ ಗದೆ ಅವನ ತಲೆಗೇ ತಿರುಗಿ ಅಪ್ಪಳಿಸಿ ಹೊಡೆಯುತ್ತದೆ. ತಲೆ ನೂರು ಹೋಳಾಗಿ ಶ್ರುತಾಯುಧ ಸತ್ತು ಬೀಳುತ್ತಾನೆ. ಈ ಘಟನೆ ಮತ್ತು ಇದು ಸೂಚನೆ ಮಾಡುವ ಆಧ್ಯಾತ್ಮಿಕ ಅರ್ಥದ ಕುರಿತ ಚಿಂತನೆ ಈ ಭಾಗದಲ್ಲಿದೆ. “ವಿವರವೇನೋ ತಿಳಿಯೆ” ಎಂಬ ಶ್ರೀ ಕನಕದಾಸಾರ್ಯರ ಮಾತಿನ ಅಭಿಪ್ರಾಯದ ಸಮರ್ಥನೆಯೊಂದಿಗೆ.
ದೇವರೊಡ್ಡುವ ಪರೀಕ್ಷೆಯನ್ನು ಗೆಲ್ಲುವ ಬಗೆ
ಸಾಧನೆಯ ಮಾರ್ಗದಲ್ಲಿ ದೇವರು ಕಣ್ಣಿಗೆ ಕಾಣಿಸುವಂತೆ ನಮ್ಮ ಜೊತೆಯಲ್ಲಿ ಇರುವದಿಲ್ಲ, ಅಥವಾ ಇಂತಿಂತಹ ಘಟನೆಗಳು ನಡೆಯುತ್ತವೆ, ಸಿದ್ಧನಾಗಿರು ಎಂದೂ ತಿಳಿಸುವದಿಲ್ಲ. ಪ್ರತೀಕ್ಷಣ ಹೊಸ ಸವಾಲುಗಳು ಜೀವನದಲ್ಲಿ ಎದುರಾಗುತ್ತವೆ. ನಾವು ದೇವರಲ್ಲಿ ವಿಶ್ವಾಸವಿಟ್ಟೇ ಮುಂದುವರೆಯಬೇಕು. ಆ ವಿಶ್ವಾಸ ಹೇಗಿರಬೇಕು ಮತ್ತು ದೇವರು ಆ ವಿಶ್ವಾಸವನನ್ನು ಪರೀಕ್ಷಿಸುವ ಬಗೆ, ನಾವು ಅದನ್ನು ದಾಟುವ ಕ್ರಮ ಎಲ್ಲವನ್ನೂ ಸ್ವಯಂ ಶ್ರೀಕೃಷ್ಣ ಈ ಘಟನೆಯ ಮುಖಾಂತರ ತಿಳಿಸುತ್ತಾನೆ, ತಪ್ಪದೇ ಕೇಳಿ.
ಕೃಷ್ಣಾರ್ಜುನರ ರಣ ವೈಭವ
ಘನಘೋರವಾದ ಕುರುಕ್ಷೇತ್ರದ ಯುದ್ಧ. ಜಯದ್ರಥನನ್ನು ಇಂದು ಸಂಜೆಯ ಒಳಗೆ ಕೊಂದೇ ಕೊಲ್ಲುತ್ತೇನೆ, ಎಂದು ಅರ್ಜುನ ಪ್ರತಿಜ್ಞೆ ಮಾಡಿ ಹೊರಟಿರುತ್ತಾನೆ. ಜಯದ್ರಥನನ್ನು ಕೊಲ್ಲಲಿಕ್ಕಾಗದಿದ್ದರೆ ಅರ್ಜುನ ಅಗ್ನಿಪ್ರವೇಶ ಮಾಡುತ್ತಾನೆ, ಸುಲಭವಾಗಿ ಅವನ ಸಾವಾಗುತ್ತದೆ ಎಂದು ಎಣಿಸಿದ ಕೌರವರು ಮಹಾಪ್ರಯತ್ನ ಮಾಡಿ ಅರ್ಜುನನ್ನು ಎಲ್ಲ ಕಡೆಯಿಂದಲೂ ತಡೆಹಿಡಿದಿರುತ್ತಾರೆ. ಅಂತಹ ಭೀಕರ ಪರಿಸ್ಥಿತಿಯಲ್ಲಿಯೂ ರಥಕ್ಕೆ ಸ್ಥಳ ಮಾಡಿಕೊಳ್ಳುತ್ತ ಕೃಷ್ಣ ರಥ ಮುನ್ನಡೆಸುತ್ತಿರುತ್ತಾನೆ. ಬಳಲಿದ ಕುದುರೆಗಳು ಬಾಯಾರಿ ಬಿಡುತ್ತವೆ. ಆಗ ಯುದ್ಧದ ಮಧ್ಯದಲ್ಲಿಯೇ ರಥವನ್ನು ನಿಲ್ಲಿಸಿ, ರಥದಿಂದ ಕುದುರೆಗಳನ್ನು ಬಿಚ್ಚಿ, ಅವುಗಳಿಂದ ತಗುಲಿದ್ದ ಬಾಣಗಳನ್ನು ತೆಗೆದು, ಮುಲಾಮು ಹಚ್ಚಿ, ನೀರು ಕುಡಿಸಿ, ಆಹಾರ ತಿನ್ನಿಸಿ ಅವುಗಳ ಶ್ರಮವನ್ನು ಶ್ರೀಕೃಷ್ಣ ಪರಿಹಾರ ಮಾಡುತ್ತಾನೆ. ನೀರು ಸಾಲದು ಎಂದಾಗ ಅರ್ಜುನ ಸರೋವರವನ್ನೇ ನಿರ್ಮಿಸುತ್ತಾನೆ. ರಣರಂಗದ ಮಧ್ಯದಲ್ಲಿ ಒಂದು ಉದ್ಯಾನವನದಲ್ಲಿ ಇದ್ದಂತೆ ವರ್ತಿಸಿದ ಆ ಕೃಷ್ಣಾರ್ಜುನರ ಅದ್ಭುತ ಸಾಹಸದ ಚಿತ್ರಣ ಈ ಭಾಗದಲ್ಲಿದೆ.
ಶ್ರೀಹರಿಭಕ್ತಿಸಾರದ 32-33ನೇ ಪದ್ಯಗಳು
ಜೀವ ಮತ್ತು ಪರಮಾತ್ಮರ ಸಂಬಂಧವನ್ನು ನಿರೂಪಿಸುವ ಸಂದರ್ಭದಲ್ಲಿ ಶ್ರೀ ಕನಕದಾಸಾರ್ಯರು ಇದ್ದಕ್ಕಿದ್ದಂತೆ ಮಹಾಭಾರತದ ಕುರಿತು ಮಾತನಾಡುತ್ತಾರೆ. ಆ ಮಹಾನುಭಾವರ ಉಕ್ತಿಯ ಅಭಿಪ್ರಾಯವನ್ನು ಶ್ರೀಮದಾಚಾರ್ಯರ ತಾತ್ಪರ್ಯನಿರ್ಣಯದ ಆಧಾರದೊಂದಿಗೆ ಇಲ್ಲಿ ವಿವರಿಸಲಾಗಿದೆ. ನಮ್ಮೊಳಗೇ ನಡೆಯುವ ಮಹಾಭಾರತವನ್ನು, ಅರ್ಥಾತ್ ಮಹಾಭಾರತದ ಆಧ್ಯಾತ್ಮಿಕ ಮುಖವನ್ನು ಪರಿಚಯಿಸುವದರೊಂದಿಗೆ.
ಶತ್ರುಗಳನ್ನು ಗೆಲ್ಲುವ ಕ್ರಮ
ಆಂತರಿಕ ಶತ್ರು, ಬಾಹ್ಯಶತ್ರು, ಹಿತಶತ್ರು, ಸಮೂಹಶತ್ರು ಎಂಬ ಶತ್ರುಗಳನ್ನು ಸಾಧಕನು ಗೆಲ್ಲುವ ಬಗೆಯ ವಿವರಣೆ ಇಲ್ಲಿದೆ.
ಶ್ರೀ ಹರಿಭಕ್ತಿಸಾರದ 30ನೆಯ ಪದ್ಯದ ಉತ್ತರಾರ್ಧ
ಮೊಲೆಯನುಣಿಸಿದ ಬಾಲಿಕೆಯ ಕರುಣದಿ ಪಿಡಿದಸುವನಪಹರಿಸಿ ಎನ್ನುತ್ತಾರೆ ಶ್ರೀ ಕನಕದಾಸಾರ್ಯರು. ಕೃಷ್ಣನ ಸೋದರಮಾವನನ್ನು ಆಡಿಸಿ ಬೆಳಿಸಿದ ಪೂತನೆ ಬಾಲಿಕೆ ಹೇಗಾಗಲು ಸಾಧ್ಯ? ಮತ್ತು ಅವಳ ಪ್ರಾಣ ಹೀರಿದ್ದು ಕಾರುಣ್ಯ ಹೇಗೆ ಎಂಬ ಪ್ರಶ್ನೆಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ನೀಡಿರುವ ಪರಮಾದ್ಭುತ ಉತ್ತರಗಳನ್ನು ಶ್ರೀ ಕನಕದಾಸಾರ್ಯರು ಇಲ್ಲಿ ಸಂಗ್ರಹಿಸಿರುವ ಬಗೆಯನ್ನು ವಿವರಿಸಲಾಗಿದೆ. ತ್ರಿಪುರರ ಲಲನೆಯವರ ವ್ರತಗೆಡಿಸಿದ ಕೆಲಸ ಉತ್ತಮವಾಯ್ತು ಎಂಬ ಮಾತಿನ ವಿವರಣೆಯೊಂದಿಗೆ, ಹಾಗೂ ನಾವು ನಮ್ಮೊಡೆಯನಲ್ಲಿ ಸಲ್ಲಿಸಬೇಕಾದ ಪ್ರಾರ್ಥನೆಯೊಂದಿಗೆ.
ಶ್ರೀಹರಿಭಕ್ತಿಸಾರದ 30ನೆಯ ಪದ್ಯದ ಪೂರ್ವಾರ್ಧ
ಬಲಿಯ ಬಂಧಿಸಿದ ಕೆಲಸ ಉತ್ತಮವಾಯ್ತು ಎಂದು ಶ್ರೀ ಕನಕದಾಸಾರ್ಯರು ಹೇಳುತ್ತಾರೆ. ಬಂಧಿಸಿದ್ದು ಕಾರುಣ್ಯ ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ, ಹಾಗೂ ದ್ರೌಪದೀ ದೇವಿಯರ ವಸ್ತ್ರಾಪಹರಣದ ಕಾಲಕ್ಕೆ ಪಾಂಡವರು ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆಗೆ ಉತ್ತರವನ್ನು ಉಪನ್ಯಾಸದಲ್ಲಿ ಕೇಳುತ್ತೇವೆ. ಮತ್ತು ದ್ರೌಪದೀ ವಸ್ತ್ರಾಪಹರಣ ಸಂಕೇತಿಸುವ ನಮ್ಮ ಜೀವನದ ಘಟನೆಗಳ, ನಾವು ಪರಮಾತ್ಮನನ್ನು ಬೇಡಬೇಕಾದ ಬಗೆಯ ವಿವರಣೆಯೂ ಇಲ್ಲಿದೆ.
ದ್ವೇಷಿಗಳಿಗೂ ಮುಕ್ತಿಯಾಗುತ್ತದೆಯೇ?
ದೇವರನ್ನು ದ್ವೇಷಮಾಡಿದವಿರಿಗೂ ಮುಕ್ತಿಯಾಗುತ್ತದೆ ಎನ್ನುವ ಅರ್ಥ ತೋರುವ ಅನೇಕ ತರಹದ ಮಾತುಗಳನ್ನು ನಾವು ಪುರಾಣಗಳಲ್ಲಿ ಕೇಳುತ್ತೇವೆ. ಶ್ರೀ ಕನಕದಾಸಾರ್ಯರೂ ಸಹಿತ, ಸಮರದೊಳಗೆ ವಿಕ್ರಮದಿ ವೈರವ ಮಾಡಿದವರಿಗೆ ಅಮರಪದವಿಯನಿತ್ತೆ ಎಂದು ಹೇಳಿದ್ದಾರೆ. ಹಾಗಾದರೆ ದೇವರನ್ನು ದ್ವೇಷ ಮಾಡಿದರೂ ಮುಕ್ತಿಯಾಗಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯುರು ಅನುವ್ಯಾಖ್ಯಾನದಲ್ಲಿ ನೀಡಿರುವ ಪರಮಾದ್ಭುತ ಉತ್ತರದ ಅರ್ಥಾನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀ ಹರಿಭಕ್ತಿಸಾರದ 28ನೆಯ ಪದ್ಯ
ಹಗೆಯರಿಗೆ ವರವೀವರಿಬ್ಬರು, ತೆಗೆಯಲರಿಯರು ಕೊಟ್ಟ ವರಗಳ ಎಂದು ಶ್ರೀ ಕನಕದಾಸಾರ್ಯರು ಹೇಳುತ್ತಾರೆ. ಬ್ರಹ್ಮದೇವರು ಕೊಟ್ಟವರವನ್ನು ಬ್ರಹ್ಮದೇವರಿಗೆ ಸಮಾನರಾದ ಮುಖ್ಯಪ್ರಾಣದೇವರು ಮೀರಿರುವದನ್ನು ಹತ್ತಾರು ಕಡೆಯಲ್ಲಿ ಕಾಣುತ್ತೇವೆ. ಬ್ರಹ್ಮದೇವರ ವರವನ್ನು ವಾಯುದೇವರಿಗೆ ಮೀರಲಿಕ್ಕೆ ಸಾಧ್ಯ ಎಂದ ಬಳಿಕ ಬ್ರಹ್ಮದೇವರಿಗೂ ಸಾಧ್ಯ ಎಂದು ನಿರ್ಣೀತವಾಯಿತು. ಅಂದ ಮೇಲೆ ದಾಸರಾಯರು ಹೀಗೆ ಹೇಳಿದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಶ್ರೀ ಕನಕದಾಸರೇ ನೀಡಿರುವ ಉತ್ತರವನ್ನು — ಶ್ರೀಮಧ್ವಸಿದ್ಧಾಂತದ ಶ್ರೇಷ್ಠ ಸಿದ್ಧಾಂತವನ್ನು — ನಾವಿಲ್ಲಿ ಕೇಳುತ್ತೇವೆ. ದಾಸಸಾಹಿತ್ಯ ಎಷ್ಟು ಗಂಭೀರ ಎನ್ನುವದಕ್ಕೆ ದೃಷ್ಟಾಂತವಾಗಿ ನಿಲ್ಲುವ ಪದ್ಯವಿದು. ತಪ್ಪದೇ ಕೇಳಿ. ತೆಗೆದು ಕೊಡುವ ಸಮರ್ಥರಾರೀ ಎಂಬ ಅದ್ಭುತವಾಕ್ಯದ ಅರ್ಥಾನುಸಂಧಾನದೊಂದಿಗೆ.
ಶ್ರೀ ಹರಿಭಕ್ತಿಸಾರದ 27ನೇ ಪದ್ಯ
ದೇವರೂ ಶರಣಾಗತರಕ್ಷಕ, ಒಬ್ಬ ಸದ್ಗುಣಿ ರಾಜನೂ ಶರಣಾಗತರಕ್ಷಕ ಇಬ್ಬರಲ್ಲೂ ವ್ಯತ್ಯಾಸವೇನು ಎನ್ನುವ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ನೀಡಿರುವ ಅದ್ಭುತ ಉತ್ತರದ ವಿವರಣೆ ಈ ಉಪನ್ಯಾಸದಲ್ಲಿದೆ. ತಪ್ಪದೇ ಕೇಳಿ.
ಶ್ರೀ ಹರಿಭಕ್ತಿಸಾರದ 26ನೇ ಪದ್ಯ
“ಸಾಗರನ ಮಗಳರಿಯದಂತೆ ಸರಾಗದಲ್ಲಿ ಸಂಚರಿಸುತಿಹ” “ಕರಿರಾಜ ಕರೆಯಲು ಸಿರಿಗೆ ಹೇಳದೆ ಬಂದೆ” ಇತ್ಯಾದಿ ಮಾತುಗಳನ್ನು ನೋಡಿದಾಗ ಶ್ರೀಹರಿಯೂ ಸಹ ಕ್ಷುದ್ರ ಗಂಡಸರ ಹಾಗೆ ಹೆಂಡತಿಗೆ ತಿಳಿಸದಂತೆ ಓಡಾಡುತ್ತಾನೆ ಮತ್ತು ಲಕ್ಷ್ಮೀದೇವಿಗೆ ತಿಳಿಯದ ಸ್ಥಳಕ್ಕೆ ಹೋಗುತ್ತಾನೆ ಎಂದರೆ ಲಕ್ಷ್ಮೀದೇವಿಯಿಲ್ಲದ ಸ್ಥಳಕ್ಕೆ ಹೋಗುತ್ತಾನೆ ಎಂದಾಗುತ್ತದೆ, ಹೀಗಾಗಿ ದೇವರಿಗೂ ಲಕ್ಷ್ಮೀದೇವಿಯರಿಗೂ ವಿಯೋಗವಿದೆ. ಅಂದಮೇಲೆ ದಾಸಸಾಹಿತ್ಯದ ಈ ವಚನಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಈ ಉಪನ್ಯಾಸದಲ್ಲಿ ಉತ್ತರವಿದೆ. ‘ನಿಮಿತ್ತಕಾರಣವೇನು’ ಎಂಬ ಶ್ರೀಕನಕದಾಸರ ಶಬ್ದಪ್ರಯೋಗದ ಕೌಶಲದ ಕುರಿತ ವಿವರಣೆಯೊಂದಿಗೆ.
ಶ್ರೀ ಹರಿಭಕ್ತಿಸಾರದ 25ನೆಯ ಪದ್ಯ
ಭಗವಂತನನ್ನು ವಿಶ್ವಕುಟುಂಬಿ ಎಂದು ಚಿಂತಿಸಿ ಪ್ರಾರ್ಥಿಸುವದನ್ನು ತಿಳಿಸಿಕೊಡುವ ಪದ್ಯ — ಸಿರಿಯು ಕುಲಸತಿ ಸುತನು ಕಮಲಜ ಎನ್ನುವದು. ಮಂಗಳಾಷ್ಟಕದ ಉಪನ್ಯಾಸದಲ್ಲಿ ದೇವರ ಮಹಾಕುಟುಂಬದ ವೈಭವವನ್ನು ಚಿಂತಿಸಿದ್ದೇವೆ. ಇಲ್ಲಿ, ದೇವರನ್ನು ಯಾಕಾಗಿ ವಿಶ್ವಕುಟುಂಬಿ ಎಂದು ಚಿಂತಿಸಬೇಕು, ಆ ವಿಶ್ವಕುಟುಂಬಿಯಲ್ಲಿ ಏನನ್ನು ಪ್ರಾರ್ಥನೆ ಮಾಡಬೇಕು ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ.
ಶ್ರೀ ಹರಿಭಕ್ತಿಸಾರದ 24ನೆಯ ಪದ್ಯ
ಭಗವಂತನ ಇಬ್ಬರು ಮಕ್ಕಳ ಮಾಹಾತ್ಮ್ಯವನ್ನು ಚಿಂತನೆ ಮಾಡುವದರೊಂದಿಗೆ ಶ್ರೀಹರಿಯ ಮಾಹಾತ್ಮ್ಯ ಅದೆಷ್ಟು ಅನಂತ ಎನ್ನುವದನ್ನು ಶ್ರೀ ಕನಕದಾಸರು ನಮಗಿಲ್ಲಿ ಮನಗಾಣಿಸುತ್ತಾರೆ. ಎಷ್ಟು ತಿಳಿದರೂ ಪೂರ್ಣ ತಿಳಿಯಲು ಸಾಧ್ಯವಿಲ್ಲದ ಅನಂತಾನಂತಪದಾರ್ಥಗಳನ್ನೊಳಗೊಂಡ ಹದಿನಾಲ್ಕು ಲೋಕಗಳ ಸೃಷ್ಟಿಕರ್ತ ಬ್ರಹ್ಮದೇವರ ಮಾಹಾತ್ಮ್ಯದ ಹಾಗೂ ಪ್ರತ್ಯೇಕ ಪ್ರತ್ಯೇಕವಾಗಿ ಅನಂತಾನಂತ ಕರ್ಮಗಳನ್ನು ಹೊಂದಿರುವ ಅನಂತ ಜೀವರಾಶಿಗಳನ್ನು ನಿಯಮಿಸುವ ವಾಯುದೇವರ ಮಾಹಾತ್ಮ್ಯದ ಚಿಂತನೆ ಈ ಭಾಗದಲ್ಲಿದೆ.
ಶ್ರೀಹರಭಕ್ತಿಸಾರದ 23ನೆಯ ಪದ್ಯ
ದೇವರೊಡನೆ ಭಕ್ತರ ಬಾಂಧವ್ಯ ಎಂತಹುದು ಎನ್ನುವದಕ್ಕೆ ಶ್ರೀ ಕನಕದಾಸರು ನೀಡಿದ ಉತ್ತರ — ತಾಯಿ ಮಕ್ಕಳ ಸಂಬಂಧ ಎಂದು. ನಮ್ಮ ಮನಸ್ಸು ಕರಗಿ ಶ್ರೀಹರಿಯ ಚರಣಕಮಲಗಳಲ್ಲಿ ನಮ್ಮ ಜೀವಚೈತನ್ಯ ಶರಣುಹೋಗುವಂತೆ ಈ ಸಂಬಂಧವನ್ನು ಶ್ರೀದಾಸರು ಇಲ್ಲಿ ಚಿತ್ರಿಸಿದ್ದಾರೆ. ಮತ್ತು ವ್ಯಾಸಸಾಹಿತ್ಯ ಮತ್ತು ದಾಸಸಾಹಿತ್ಯ ಎಂದರೆ ಜ್ಞಾನ ಭಕ್ತಿಗಳ ಸಂಗಮ ಎನ್ನುವದನ್ನು ಶ್ರೀ ಕನಕದಾಸರು ಈ ಪದ್ಯದ ಮುಖಾಂತರ ನಮಗೆ ಮನಗಾಣಿಸುತ್ತಾರೆ. ತಪ್ಪದೇ ಕೇಳಿ.
ಶ್ರೀ ಹರಿಭಕ್ತಿಸಾರದ 22ನೆಯ ಪದ್ಯ
ದೇವರ ಮುಂದೆ ನಾವೆಷ್ಟು ಸಣ್ಣವರು ಎನ್ನುವ ತತ್ವದ ಎಚ್ಚರವನ್ನು ವೇದಶಾಸ್ತ್ರ ಪುರಾಣ್ಯ ಪುಣ್ಯದ ಹಾದಿಯನು ನಾನರಿಯೆ ಎಂಬ ಪದ್ಯದ ಮುಖಾಂತರ ಶ್ರೀ ಕನಕದಾಸರು ನಮಗೆ ನೀಡುತ್ತಾರೆ. ಆ ಪದ್ಯದ ಅರ್ಥಾನುಸಂಧಾನ ಈ ಭಾಗದಲ್ಲಿದೆ.
ದೇವರ ಕುರಿತು ಬರೆಯುವ ಮುನ್ನ
ದೇವರ ಕುರಿತು ಒಂದು ಹಾಡನ್ನೋ, ಕೃತಿಯನ್ನೋ, ಸ್ತೋತ್ರವನ್ನೋ ಬರೆಯಬೇಕು ಎನ್ನುವ ತವಕ ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಇದ್ದೇ ಇರುತ್ತದೆ. ಅನೇಕರು ಪ್ರಯತ್ನವನ್ನೂ ಪಡುತ್ತಾರೆ. ಆ ರೀತಯ ಭಕ್ತ ಸ್ತೋತ್ರ ರಚಿಸುವ ಮುನ್ನ, ಹಾಡು ಬರೆಯುವ ಮುನ್ನ ಯಾವ ಎಚ್ಚರಗಳನ್ನಿಟ್ಟುಕೊಳ್ಳಬೇಕು ಎನ್ನುವದನ್ನು ಶ್ರೀಕನಕದಾಸರು ನಮಗೆ ಅದ್ಭುತವಾದ ಕ್ರಮದಲ್ಲಿ ತಿಳಿ ಹೇಳುತ್ತಾರೆ. ಶ್ರೀಹರಿಭಕ್ತಿಸಾರವನ್ನು ರಚಿಸಹೊರಟಿರುವ ಶ್ರೀ ಕನಕದಾಸರು “ಬಳಸುವರು ಸತ್ಕವಿಗಳು ಅವರಗ್ಗಳಿಕೆ ಎನಗಿನಿತಿಲ್ಲ” ಎಂದು ಶ್ರೀಹರಿಯ ಮುಂದೆ ತಮ್ಮ ವಿನಯವನ್ನು ನಿವೇದಿಸಿಕೊಳ್ಳುತ್ತಾರೆ. ಈ ಪ್ರಸಂಗದಲ್ಲಿ ಶ್ರೀವಾದಿರಾಜರು, ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ಶ್ರೀಪಾದರಾಜರು, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು ರಚಿಸಿರುವ ಸ್ತೋತ್ರಗಳ ಸೊಬಗಿನ ಚಿಂತನೆ ಈ ಉಪನ್ಯಾಸದಲ್ಲಿದೆ.
ಶ್ರೀ ಹರಿಭಕ್ತಿಸಾರದ 19ನೆಯ ಪದ್ಯದ ಪೂರ್ವಾರ್ಧ
ಶ್ರೀ ಕನಕದಾಸರ ಮೇಲೆ ಪರಮಾತ್ಮ ಮಾಡಿದ ಪರಮಾನುಗ್ರಹ ಅದೆಷ್ಟು ಅದ್ಭುತ ಎನ್ನುವದನ್ನು ತಿಳಿಸುವ ಉಪನ್ಯಾಸ.
ಶ್ರೀ ಹರಿಭಕ್ತಿಸಾರದ 18ನೆಯ ಪದ್ಯದ ಉತ್ತರಾರ್ಧ
ಹರಿಭಕ್ತಿಸಾರ ನಮ್ಮ ಸಾಧನೆಯ ಮಾರ್ಗದಲ್ಲಿ ಅದೆಷ್ಟು ದೊಡ್ಡ ಉಪಕಾರವನ್ನು ಮಾಡುತ್ತದೆ ಎನ್ನುವದನ್ನು ವಿವರಿಸುವ ಭಾಗ.
ಶ್ರೀ ಹರಿಭಕ್ತಿಸಾರದ ಮೇಲಿನ ಆಕ್ಷೇಪಗಳು
ಇಂದಿನ ಜನ ಶ್ರೀಹರಿಭಕ್ತಿಸಾರದ ಮೇಲೆ ಮಾಡುವ ಆಕ್ಷೇಪಗಳಿಗೆ ಶ್ರೀ ಕನಕದಾಸರೇ ನೀಡಿದ ಉತ್ತರಗಳ ಸಂಕಲನ ಇಲ್ಲಿದೆ. ಪ್ರತಿಯೊಬ್ಬರೂ ಕೇಳಲೇಬೇಕಾದ ಭಾಗ.
ದೇವರ ಜೊತೆ ಮಾತನಾಡುವದು ಹೇಗೆ?
ದೇವರು ನಮ್ಮ ಅಂತರ್ಯಾಮಿ, ನಮ್ಮ ಸರ್ವಸ್ವ. ಹೊರಗಿನ ಪ್ರಪಂಚದಲ್ಲಿಯೇ ಆಸಕ್ತರಾದ ನಾವು ಒಳಗಿರುವ ನಮ್ಮ ಸ್ವಾಮಿಯನ್ನು ಮರೆತಿರುತ್ತೇವೆ. ಅವನೊಡನೆ ಹೇಗೆ ಸಂಪರ್ಕ ಮಾಡಬೇಕು ಎನ್ನುವದನ್ನೇ ಅರಿತಿರುವದಿಲ್ಲ. ಯಾರೂ ಸ್ಪರ್ಶ ಮಾಡದ ವಿಷಯಗಳನ್ನು ಕೈಗೆತ್ತಿಕೊಂಡು ಅದ್ಭುತವಾದ ವಿಷಯಗಳನ್ನು ತಿಳಿಸುವದಕ್ಕೆ ಪ್ರಸಿದ್ಧರಾದ ಕನಕದಾಸಾರ್ಯರು ಭಗವಂತ ಮತ್ತು ಭಕ್ತರೊಡಗಿನ ಸಂಬಂಧದ ಅದ್ಭುತ ಪ್ರಪಂಚವವೊಂದನ್ನು ಅನಾವರಣಗೊಳಿಸಿದ್ದಾರೆ. ದೇವರ ಜೊತೆ ಹೇಗೆ ಮಾತನಾಡಬೇಕು ಎನ್ನುವದನ್ನು ತಿಳಿಸುವ ಅವರ ದಿವ್ಯಪದ್ಯಗಳ ಅನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
ಶ್ರೀಹರಿಭಕ್ತಿಸಾರದ 15ನೆಯ ಪದ್ಯ
ಶ್ರೀಕೃಷ್ಣ ಪಾಂಡವರ ಮೇಲೆ ಮಾಡಿದ ಪರಮಾನುಗ್ರಹದ ಚಿಂತನೆ, ಮತ್ತು ಭಕ್ತರನ್ನು ಉದ್ಧರಿಸುವ ಅದ್ಭುತ ಕ್ರಮದ ನಿರೂಪಣೆ.
ಶ್ರೀಹರಿಭಕ್ತಿಸಾರದ 14ನೆಯ ಪದ್ಯ
ನೀಲವರ್ಣ ವಿಶಾಲ ಶುಭಗುಣಶೀಲ ಮುನಿಕುಲಪಾಲ ಲಕ್ಷ್ಮೀಲೋಲ ರಿಪುಶಿಶುಪಾಲಮಸ್ತಕಶೂಲ ವನಮಾಲ | ಮೂಲಕಾರಣ ವಿಮಲ ಯಾದವಜಾಲಹಿತ ಗೋಪಾಲ ಅಗಣಿತಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 13ನೆಯ ಪದ್ಯ
ಬಾಣಾಸುರನನ್ನು ಶ್ರೀಹರಿ ನಿಗ್ರಹಿಸಿದ ಬಗೆಯ ವಿವರಣೆ ಇಲ್ಲಿದೆ.
ಶ್ರೀಹರಿಭಕ್ತಿಸಾರದ 12ನೆಯ ಪದ್ಯ
ಕುಂದಕುಟ್ಮಲರದನ ಪರಮಾನಂದ ಹರಿ ಗೋವಿಂದ ಸನಕಸನಂದವಂದಿತ ಸಿಂಧುಬಂಧನ ಮಂದರಾದ್ರಿಧರ | ಇಂದಿರಾಪತಿ ವಿಜಯಸಖ ಅರವಿಂದನಾಭ ಪುರಂದರಾರ್ಚಿತ ನಂದಕಂದ ಮುಕುಂದ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 11ನೆಯ ಪದ್ಯ
ದಾಶರಥಿ ವೈಕುಂಠನಗರನಿವಾಸ ತ್ರೈಜಗೀಶ ಪಾಪವಿನಾಶ ಪರಮವಿಲಾಸ ಹರಿ ಸರ್ವೇಶ ದೇವೇಶ | ವಾಸುದೇವ ದಿನೇಶಶತಸಂಕಾಶ ಯದುಕುಲವಂಶತಿಲಕ ಪರಾಶರಾನತ ದೇವ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 10ನೆಯ ಪದ್ಯ
ಮಂಗಳಾತ್ಮಕ ದುರಿತತಿಮಿರಪತಂಗ ಗರುಡತುರಂಗ ರಿಪುಮದಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ | ಅಂಗದಪ್ರಿಯನಂಗಪಿತ ಕಾಳಿಂಗಮರ್ದನ ಅಮಿತಕರುಣಾಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 09ನೆಯ ಪದ್ಯ
ಚಿತ್ರಕೂಟನಿವಾಸ ವಿಶ್ವಾಮಿತ್ರಕ್ರತುಸಂರಕ್ಷ ರವಿಶಶಿನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ | ಧಾತ್ರಿಜಾಂತಕ ಕಪಟನಾಟಕಸೂತ್ರ ಪರಮಪವಿತ್ರ ಫಲ್ಗುನಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 08ನೆಯ ಪದ್ಯ
ಅಕ್ಷಯಾಶ್ರಿತಸುಜನಜನಸಂರಕ್ಷಣ ಶ್ರೀವತ್ಸ ಕೌಸ್ತುಭ ಮೋಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ | ಪಕ್ಷಿವಾಹನ ದೇವಸಂಕುಲಪಕ್ಷ ನಿಗಮಾಧ್ಯಕ್ಷ ವರನಿಟಿಲಾಕ್ಷಸಖ ಸರ್ವೇಶ ರಕ್ಷಿಸು ನಮ್ಮನನವರತ ॥
ಶ್ರೀಹರಿಭಕ್ತಿಸಾರದ 07ನೆಯ ಪದ್ಯ
ವೇದಗೋಚರ ವೇಣುನಾದವಿನೋದ ಮಂದರಶೈಲಧರ ಮಧುಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ | ಯಾದವೇಂದ್ರ ಯಶೋದನಂದನ ನಾದಬಿಂದುಕಲಾತಿಶಯ ಪ್ರಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 6ನೆಯ ಪದ್ಯ
ತಾಮರಸದಳನಯನ ಭಾರ್ಗವರಾಮ ಹಲಧರರಾಮ ದಶರಥ- ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ | ಸಾಮಗಾನ ಪ್ರೇಮ ಕಾಂಚನದಾಮಧರ ಸುತ್ರಾಮವಿನಮಿತ ನಾಮರವಿಕುಲಸೋಮ ರಕ್ಷಿಸು ನಮ್ಮನನವರತ॥
ಶ್ರೀ ಹರಿಭಕ್ತಿಸಾರ 05ನೆಯ ಪದ್ಯ
ಕ್ಷೀರವಾರಿಶಯನ ಶಾಂತಾಕಾರ ವಿವಿಧವಿಹಾರ ಗೋಪೀಜಾರ ನವನೀತಚೋರ ಚಕ್ರಾಧಾರ ಭವದೂರ | ಮಾರಪಿತ ಗುಣಹಾರ ಸರಸಾಗಾರ ರಿಪುಸಂಹಾರ ತುಂಬುರುನಾರದಪ್ರಿಯ ವರದ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 04ನೆಯ ಪದ್ಯ
ಕಮಲಸಂಭವವಿನುತ ವಾಸವ ನಮಿತ ಮಂಗಳಚರಿತ ದುರಿತಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ | ಅಮಿತವಿಕ್ರಮಭೀಮ ಸೀತಾರಮಣ ವಾಸುಕಿಶಯನ ಖಗಪತಿಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 03ನೆಯ ಪದ್ಯ
ಅನುಪಮಿತಚಾರಿತ್ರ ಕರುಣಾವನಧಿ ಭಕ್ತ ಕುಟುಂಬಿ ಯೋಗೀಜನಹೃದಯಪರಿಪೂರ್ಣ ನಿತ್ಯಾನಂದ ನಿಗಮನುತ | ವನಜನಾಭ ಮುಕುಂದ ಮುರಮರ್ದನ ಜನಾರ್ದನ ತ್ರೈ ಜಗತ್ಪಾವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 02ನೆಯ ಪದ್ಯದ ಉತ್ತರಾರ್ಧ
ದೇವದೇವ ಜಗದ್ಭರಿತ ವಸುದೇವಸುತ ಜಗದೇಕನಾಥ ರಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ | ಭಾವಜಾರಿಪ್ರಿಯ ನಿರಾಮಯ ರಾವಣಾಂತಕ ರಘುಕುಲಾನ್ವಯ ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ ॥
ಶ್ರೀ ಹರಿಭಕ್ತಿಸಾರದ 02ನೆಯ ಪದ್ಯದ ಪೂರ್ವಾರ್ಧ
ದೇವದೇವ, ಜಗದ್ಭರಿತ, ವಸುದೇವಸುತ, ಜಗದೇಕನಾಥ, ರಮಾವಿನೋದಿತ, ಸಜ್ಜನಾನತ, ನಿಖಿಲಗುಣಭರಿತ ಎಂಬ ಏಳು ಶಬ್ದಗಳ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ. ದೇವರ ಮಾಹಾತ್ಮ್ಯ, ಅವನ ಸರ್ವವ್ಯಾಪಿತ್ವ, ಆದರೂ ಭಕ್ತರ ಮನಸ್ಸಿಗೆ ನಿಲುಕಿ ಅವ ಉಪಾಸನೆಯನ್ನು ಸ್ವೀಕರಿಸುವ ಕಾರುಣ್ಯ, ಅವನ ಜಗತ್ಸ್ವಾಮಿತ್ವ, ಸಕಲ ರೂಪಗಳಲ್ಲಿಯೂ ಅವನು ಪರಿಪೂರ್ಣ ಎನ್ನುವದನ್ನು ದಾಸರು ಚಿತ್ರಿಸಿರುವ ಅದ್ಭುತವಾದ ರೀತಿ ಮುಂತಾದವನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ. VNA020 ಲೇಖನದಲ್ಲಿ ಈ ಪದ್ಯದ ವಿವರಣೆ ದೊರೆಯುತ್ತದೆ.
ಶ್ರೀ ಹರಿಭಕ್ತಿಸಾರದ 01ನೆಯ ಪದ್ಯದ ಉತ್ತರಾರ್ಧ
ರಾಯ ರಘುಕುಲವರ್ಯ ಎಂಬಲ್ಲಿ ರಾಯ ಎಂಬ ಶಬ್ದದ ಬಳಕೆಯ ಹಿಂದಿನ ಔಚಿತ್ಯ, ಭೂಸುರಪ್ರಿಯ ಎಂದು ಪರಮಾತ್ಮನನ್ನು ಬ್ರಾಹ್ಮಣಪ್ರಿಯ ಎಂದು ಕರೆಯಲು ಹಿಂದಿರುವ ಕಾರಣ, ಕನಕದಸರ ಹಿಂದಿನ ಜೀವನ ಚರಿತ್ರೆ, ಕನಕನಾಯಕನನ್ನು ಕನಕದಾಸರನ್ನಾಗಿ ಮಾಡಿದ ಪರಮತ್ಮನ ಚತುರ ಉಪಾಯಗಳ ಚಿಂತನೆ ಮುಂತಾದವುಗಳ ವಿವರಣೆ ಈ ಉಪನ್ಯಾಸದಲ್ಲಿದೆ. VNA018 ಮತ್ತು VNA019 ಲೇಖನದಳಲ್ಲಿ ಈ ಪದ್ಯದ ವಿವರಣೆ ದೊರೆಯುತ್ತದೆ.
ಶ್ರೀ ಹರಿಭಕ್ತಿಸಾರದ 01ನೆಯ ಪದ್ಯದ ಪೂರ್ವಾರ್ಧ
ಶ್ರೀಯರಸ, ಗಾಂಗೇಯನುತ, ಕೌಂತೇಯವಂದಿತಚರಣ, ಕಮಲದಳಾಯತಾಂಬಕ, ರೂಪಚಿನ್ಮಯ, ದೇವಕೀತನಯ ಎಂಬ ಶಬ್ದಗಳ ವಿವರಣೆ ಮತ್ತು ಮೊದಲ ಪದ್ಯದಲ್ಲಿಯೇ ಆ ಶಬ್ದಗಳ ಬಳಕೆಯ ವಿವರಣೆ ಈ ಉಪನ್ಯಾಸದಲ್ಲಿದೆ. ನಮ್ಮ ಕನಕದಾಸರು ಬಳಸುವ ಶಬ್ದಗಳಲ್ಲಿ ಅದೆಷ್ಟು ಅರ್ಥಗಳು ತುಂಬಿರುತ್ತವೆ, ಅದೆಷ್ಟು ಅದ್ಭುತವಾಗಿ ಅವರು ಶಬ್ದಗಳ ಜೋಡಣೆಯನ್ನು ಮಾಡುತ್ತಾರೆ, ಗಂಭೀರವಾದ ತತ್ವಗಳನ್ನು ಅದೆಷ್ಟು ಸುಲಭವಾಗಿ ನಿರೂಪಿಸುತ್ತಾರೆ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ.
ಪ್ರವೇಶಿಕೆ
ಶ್ರೀ ಕನಕದಾಸಾರ್ಯರ ಹಾಗೂ ಶ್ರೀಹರಿಭಕ್ತಿಸಾರದ ಮಹತ್ತ್ವವನ್ನು ಮನಗಾಣಿಸುವ ಭಾಗ.