08/08 ಶ್ರೀಪಾದರಾಜರ ವೃಂದಾವನದ ಮಾಹಾತ್ಮ್ಯ
ಶ್ರೀಪಾದರಾಜರ ವೃಂದಾವನದ ಸೇವೆಯಿಂದ ದೊರೆಯುವ ಶ್ರೇಷ್ಠಫಲಗಳ ನಿರೂಪಣೆಯೊಂದಿಗೆ ಆ ವೃಂದಾನವನಗ ಮಾಹತ್ಮ್ಯವನ್ನು ಶ್ರೀಮಚ್ಚಂದ್ರಿಕಾಚಾರ್ಯರು ಪಂಚರತ್ನಮಾಲಿಕಾಸ್ತೋತ್ರದ ಕಡೆಯ ಎರಡು ಪದ್ಯಗಳಲ್ಲಿ ನಿರೂಪಿಸುತ್ತಾರೆ. ಕೇದಾರಕ್ಷೇತ್ರದ ಕುರಿತು ತಿಳಿಯಬೇಕಾದ ಮಹತ್ತ್ವದ ತತ್ವದ ನಿರೂಪಣೆ ಇಲ್ಲಿದೆ. ತಪ್ಪದೇ ಕೇಳಿ.
07/08 ಶ್ರೀಪಾದರಾಜರ ಯೋಗಸಾಮರ್ಥ್ಯ
ಅಣ್ಣನಿಗೆ ಮದುವೆಯಾಗದೇ ಇದ್ದಾಗ ತಮ್ಮ ಮದುವೆ ಮಾಡಿಕೊಳ್ಳುವದು ಅಧರ್ಮ. ಆದರೆ, ಸಾಕ್ಷಾದ್ ವೇದವ್ಯಾಸದೇವರೇ ಹೇಳಿದ ಕಾರಣಕ್ಕೆ ಭೀಮಸೇನದೇವರು ಹಿಡಿಂಬೆಯನ್ನು ಮದುವೆಯಾದದ್ದು ಧರ್ಮವೇ. ಅಧರ್ಮವಲ್ಲ. ಕಾರಣ ಅದು ಭಗವಂತನಿಗೆ ಪ್ರಿಯ. ಹಾಗೆ, ಶ್ರೀಪಾದರಾಜರು ರಾಜವೈಭವವನ್ನು ಅನುಭವಿಸುತ್ತಿದ್ದದ್ದು ಪರಮಾತ್ಮನಿಗೆ ಪ್ರಿಯ ಎಂಬ ಕಾರಣಕ್ಕೆ ಅದು ಮಹತ್ತರ ಧರ್ಮವೇ ಹೊರತು ಅಧರ್ಮವಲ್ಲ ಎಂಬ ಉತ್ತರವನ್ನು ಹಿಂದಿನ ಉಪನ್ಯಾಸದಲ್ಲಿ ಪಡೆದುಕೊಂಡೆವು. ಆದರೆ, ಅದು ದೇವರಿಗೆ ಪ್ರಿಯ ಎಂದು ನಿರ್ಣಯಿಸುವದು ಹೇಗೆ, ಯಾರೋ ಏನೋ ಅಧರ್ಮ ಮಾಡಿ ಅದು ದೇವರಿಗೆ ಪ್ರಿಯ ಎಂದು ಹೇಳಬಹುದಲ್ಲವೇ ಎಂಬ ಪ್ರಶ್ನೆಗೆ ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ವಿಜಯೀಂದ್ರಗುರುರಾಜರು ಮತ್ತು ಶ್ರೀ ಶ್ರೀನಿಧಿತೀರ್ಥಶ್ರೀಪಾದಂಗಳವರು ನೀಡಿರುವ ಉತ್ತರಗಳ ಸಂಗ್ರಹ ಇಲ್ಲಿದೆ.
06/08 ಶ್ರೀಪಾದರಾಜರ ರಾಜವೈಭವ
ಬೆರಳುಗಳಿಗೆ ಉಂಗುರ, ಕೈಗಳಿಗೆ ಕಂಕಣ, ತೊಳುಗಳಿಗೆ ಕೇಯೂರ, ಕೊರಳಿಗೆ ಕಂಠೀಹಾರ, ವಿಧವಿಧದ ರತ್ನಹಾರಗಳು, ಮುತ್ತಿನ ಕವಚ, ಕಿರೀಟ, ಅಶ್ವ, ಗಜ, ಪಲ್ಲಕ್ಕಿ, ರಥ ಮುಂತಾದ ವಾಹನಗಳನ್ನು ಮುಂತಾದವುಗಳಿಂದ ಪರಿಶೋಭಿತರಾದ ಯತಿಕುಲವರೇಣ್ಯರು ವೈರಾಗ್ಯನಿಧಿಗಳು ಶ್ರೀ ಶ್ರೀಪಾದರಾಜಗುರುಸಾರ್ವಭೌಮರು. ಯತಿಧರ್ಮಕ್ಕೆ ವಿರುದ್ಧವಾದ ಇವನ್ನು ಶ್ರೀಪಾದರಾಜರು ಹೇಗೆ ಸ್ವೀಕರಿಸಿದರು, ತಪ್ಪಲ್ಲವೇ ಎಂಬ ಪ್ರಶ್ನೆಗೆ ಶ್ರೀಮನ್ ಮಧ್ವಸಿದ್ಧಾಂತ ನೀಡಿದ ಉತ್ತರದ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ.
05/08 ಶ್ರೀಪಾದರಾಜರ ವಾದವೈಭವ
ಸಮಗ್ರ ಮಾಧ್ವಜ್ಞಾನಿಪರಂಪರೆಯ ಗುರುಗಳಾದ ಶ್ರೀಮಚ್ಚಂದ್ರಿಕಾಚಾರ್ಯರು ಮಾಡಿರುವ ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ಪರಮಾದ್ಭುತವಾದ ವಿದ್ಯಾವೈಭವ, ವಾದವೈಭವಗಳ ಚಿತ್ರಣ ಈ ಉಪನ್ಯಾಸದಲ್ಲಿ.
04/08 ಶ್ರೀಪಾದರಾಜರ ಕಾರುಣ್ಯ
ಶ್ರೀಪಾದರಾಜರು ತಮ್ಮ ಭಕ್ತರ ಮೇಲೆ ತೋರುತ್ತಿದ್ದ, ಇಂದಿಗೂ ತೋರುತ್ತಿರುವ ಅಪಾರ ಕಾರುಣ್ಯದ ಚಿತ್ರಣ ಇಲ್ಲಿದೆ. ಅವರ ಭವ್ಯದೇಹದ ಚಿಂತನೆಯೊಂದಿಗೆ.
03/08 ಶ್ರೀಪಾದರಾಜರ ಪೂಜಾವೈಭವ
ಶ್ರೀ ಪದ್ಮನಾಭತೀರ್ಥಶ್ರೀಪಾದಂಗಳವರು ತಮ್ಮ ಶಿಷ್ಯರಾದ ಶ್ರೀ ಲಕ್ಷ್ಮೀಧರತೀರ್ಥರಿಗೆ ಆಚಾರ್ಯಕರಾರ್ಚಿತವಾದ ಒಂದೂ ಪ್ರತಿಮೆಯನ್ನೂ ನೀಡಲಿಲ್ಲವೆಂದೂ, ಶ್ರೀಪಾದರಾಜ ಮಠದಲ್ಲಿ ಯಾವುದೂ ಆಚಾರ್ಯಕರಾರ್ಚಿತ ಪ್ರತಿಮೆ ಇಲ್ಲವೆಂದೂ, ತಾವೇ ದೊಡ್ಡವರು ಎಂಬ ಭ್ರಾಂತಿಯಲ್ಲಿರುವ ಕೆಲವರು ತಮ್ಮ ಪುಸ್ತಕಗಳಲ್ಲಿ ಬರೆದುಕೊಂಡಿದ್ದಾರೆ. ಸುಳ್ಳನ್ನೇ ಪರಂಪರೆಯಾಗುಳ್ಳ ಈ ಜನರಿಗೆ ಶ್ರೀ ವಾದಿರಾಜಗುರುಸಾರ್ವಭೌಮರು ಉತ್ತರ ನೀಡಿದ್ದಾರೆ. ಗೋಪೀನಾಥಪ್ರತಿಮೆ ಕೇವಲ ಆಚಾರ್ಯಕರಾರ್ಚಿತವಲ್ಲ, ಶ್ರೀ ವೇದವ್ಯಾಸದೇವರಿಂದಲೇ ನೀಡಲ್ಪಟ್ಟಿದ್ದು ಎಂಬ ಐತಿಹಾಸಿಕ ನಿರ್ಣಯವನ್ನು ಶ್ರೀ ರಾಜರು ನೀಡಿದ್ದಾರೆ. ಅದರ ವಿವರಣೆ ಮತ್ತು ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ಪೂಜಾವೈಭವದ ಚಿತ್ರಣ ಈ ಉಪನ್ಯಾಸದಲ್ಲಿದೆ. “ಪೂಜಿತಶ್ರೀಸಹಾಯಮ್” ಎಂಬ ಚಂದ್ರಿಕಾಚಾರ್ಯರ ವಚನದ ಅರ್ಥಾನುಸಂಧಾನರೂಪವಾಗಿ.
02/08 ಶ್ರೀಪಾದರಾಜರ ವಾತ್ಸಲ್ಯ ಮತ್ತು ಆಕರ್ಷಕ ವ್ಯಕ್ತಿತ್ವ
ಶ್ರೀ ಶ್ರೀಪಾದರಾಜರ ಗುಣಮಾಹಾತ್ಮ್ಯಗಳನ್ನು ಚಿಂತನೆ ಮಾಡಹೊರಟಿರುವ ಶ್ರೀಮಚ್ಚಂದ್ರಿಕಾಚಾರ್ಯರು ತಮ್ಮ ಗುರುಗಳಲ್ಲಿ ಮೊದಲು ಸ್ತೋತ್ರ ಮಾಡಿದ ಗುಣ — ರುಚಿತಮಹೃದಯಮ್ ಎಂದು. ತಮ್ಮ ಶಿಷ್ಯರ ಮೇಲೆ ವಾತ್ಸಲ್ಯದ ಪೂರವನ್ನು ಹರಿಸುತ್ತಿದ್ದ ಶ್ರೀಪಾದರಾಜರು, ತಮ್ಮ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದವರು. ಸ್ವರ್ಣವರ್ಣತೀರ್ಥಶ್ರೀಪಾದಂಗಳವರು, ವಿಬುಧೇಂದ್ರತೀರ್ಥಶ್ರೀಪಾದಂಗಳವರು ಮುಂತಾದ ತಮಗಿಂತ ದೊಡ್ಡವರ ವಾತ್ಸಲ್ಯವನ್ನು ಪಡೆದು, ಚಂದ್ರಿಕಾಚಾರ್ಯರಾದಿ ಶಿಷ್ಯರಿಗೆ ಆ ವಾತ್ಸಲ್ಯವನ್ನು ಧಾರೆಯೆರೆದ ಘಟನೆಯನ್ನು ನಾವಿಲ್ಲಿ ಕೇಳುತ್ತೇವೆ.
01/08 ಶ್ರೀಪಾದರಾಜ ಎಂಬ ಶಬ್ದದ ಅರ್ಥ
ತಮ್ಮ ವಿದ್ಯಾಗುರುಗಳಾದ ಶ್ರೀ ಶ್ರೀಪಾದರಾಜಗುರುಸಾರ್ವಭೌಮರ ಮಹಾಮಾಹಾತ್ಮ್ಯಗಳನ್ನು ಶಿಷ್ಯರಿಗೆ ತಿಳಿಸಲೋಸುಗ ಶ್ರೀಮಚ್ಚಂದ್ರಿಕಾಚಾರ್ಯರು ಶ್ರೀಪಾದರಾಜಪಂಚರತ್ನಮಾಲಿಕಾ ಸ್ತೋತ್ರ ಎಂಬ ಪರಮಮಂಗಳ ಕೃತಿಯನ್ನು ರಚಿಸಿದ್ದಾರೆ. ಈ ಸ್ತೋತ್ರದ “ವಂದೇ ಶ್ರೀಪಾದರಾಜಮ್” ಎಂಬ ಮೊದಲ ಎರಡು ಶಬ್ದಗಳ ವಿವರಣೆ ಈ ಉಪನ್ಯಾಸದಲ್ಲಿದೆ. ಶ್ರೀಪಾದರಾಜ ಎಂಬ ಶಬ್ದಕ್ಕೆ ಶ್ರೀ ವಿಜಯದಾಸಾರ್ಯರು ತಮ್ಮ ಸುಳಾದಿಯಲ್ಲಿ ಹೇಳಿದ ಅರ್ಥದ ಅನುಸಂಧಾನದೊಂದಿಗೆ.