10/10 ಮಹಾಲಕ್ಷ್ಮಿಯೂ ದೇವರ ಅಧೀನ
ತಮ್ಮ ಮಹಾಮಾಹಾತ್ಮ್ಯವನ್ನು ಸಾಧಕವರ್ಗಕ್ಕೆ ಆರು ಮಂತ್ರಗಳಲ್ಲಿ ತಿಳಿಸಿ ಹೇಳಿದ ಲಕ್ಷ್ಮೀದೇವಿ ಪರಮಾದ್ಭುತಕ್ರಮದಲ್ಲಿ ತಾವು ಶ್ರೀಹರಿಯ ಅಧೀನ ಎನ್ನುವದನ್ನು ನಿರೂಪಿಸುತ್ತಾರೆ. ಕೇಳಿಯೇ ಆನಂದಿಸಬೇಕಾದ ಶ್ರೇಷ್ಠ ಭಾಗ. ಹೆಂಡತಿ ಏಕೆ ಗಂಡನ ಹೆಸರನ್ನು ತೆಗೆದುಕೊಳ್ಳಬಾರದು ಎನ್ನುವದರ ನಿರೂಪಣೆ ಇಲ್ಲಿದೆ. ಸಮಗ್ರ ಸೂಕ್ತಾರ್ಥದ ಸಂಕ್ಷಿಪ್ತ ವಿವರಣೆಯೊಂದಿಗೆ.
09/10 ರುದ್ರನನ್ನೂ ಸಂಹಾರ ಮಾಡುವ ದೇವತೆ
ಸಮಗ್ರ ಮೂರು ಲೋಕಗಳನ್ನು ತಮ್ಮ ನೋಟದ ಬೆಂಕಿಯಲ್ಲಿ ಪತಂಗದಂತೆ ಸುಟ್ಟು ಹಾಕುವ, ತಮ್ಮ ನರ್ತನದ ಪಾದಾಘಾತದಿಂದ ಸಮಸ್ತ ಲೋಕಗಳಲ್ಲಿ ಕಂಪವನ್ನುಂಟುಮಾಡುವ, ಸರ್ವಸಂಹಾರಕಾರದ ಮಹಾರುದ್ರದೇವರನ್ನೂ ಕೊಲ್ಲುವ ಅಪರಿಮಿತ ಸಾಮರ್ಥ್ಯದ ದೇವತೆ ಮಹಾಲಕ್ಷ್ಮೀದೇವಿ ಎನ್ನುವ ಮಹಾಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ.
08/10 ಎಲ್ಲರಿಗೂ ಪದವಿ ನೀಡುವ ದೇವತೆ
ನಾನು ಯಾರನ್ನು ಅಪೇಕ್ಷೆ ಪಡುತ್ತೇನೆಯೋ ಅವರನ್ನು ಬ್ರಹ್ಮ-ರುದ್ರರನ್ನಾಗಿ ಮಾಡುತ್ತೇನೆ ಎಂದು ಲಕ್ಷ್ಮೀದೇವಿಯ ವಚನವಿದೆ. ಹಾಗಾದರೆ ಬ್ರಹ್ಮ-ರುದ್ರಾದಿಗಳ ಪದವಿಗೆ ಅನರ್ಹರಾದವರನ್ನೂ ಲಕ್ಷ್ಮೀದೇವಿ ಆ ಪದವಿಯಲ್ಲಿ ಕೂಡಿಸುತ್ತಾರೆಯೇ? ಹೌದು ಎಂದಾದರೆ ಬ್ರಹ್ಮಸೂತ್ರಗಳ ಸಿದ್ಧಾಂತಕ್ಕೆ ವಿರೋಧವುಂಟಾಯಿತು. ಇಲ್ಲ ಎಂದಾದಲ್ಲಿ ಈ ಮಾತಿಗೆ ಅರ್ಥವಿಲ್ಲದಂತಾಯಿತು ಎಂಬ ಪ್ರಶ್ನಗೆ ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ನೀಡಿರುವ ಉತ್ತರದ ಅರ್ಥಾನುಸಂಧಾನ ಇಲ್ಲಿದೆ. ತಪ್ಪದೇ ಕೇಳಿ.
07/10 ಮಹಾಲಕ್ಷ್ಮಿಯಿಲ್ಲದೆ ಜಗತ್ತಿಲ್ಲ
ಸಮಸ್ತ ಜೀವಸಂಕುಲದ ಸಕಲ ವ್ಯಾಪಾರಗಳೂ ಮಹಾಲಕ್ಷ್ಮೀದೇವಿಯ ಅಧೀನ ಎನ್ನುವ ಪ್ರಮೇಯದ ನಿರೂಪಣೆ ಅಂಭೃಣೀಸೂಕ್ತದ ನಾಲ್ಕನೆಯ ಮಂತ್ರದಲ್ಲಿದೆ. ತ್ರಿವಿಧ ಜೀವರಾಶಿಗಳೂ ಸಹ ಲಕ್ಷ್ಮೀದೇವಿಯ ಅಧೀನವಾಗಿದ್ದಾಗ, ಯಾಕೆ ಒಬ್ಬರಿಗೆ ಅನುಗ್ರಹವುಂಟಾಗುತ್ತದೆ ಮತ್ತಿಬ್ಬರಿಗೆ ನಿಗ್ರಹ ಎನ್ನುವದನ್ನು ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದ್ವಾದಿರಾಜಗುರುಸಾರ್ವಭೌಮರು ಮತ್ತು ಶ್ರೀ ಮಂತ್ರಾಲಯಪ್ರಭುಗಳು ನಿರೂಪಿಸಿದ್ದಾರೆ. ಆ ಪರಮಮಂಗಳ ಪ್ರಮೇಯಗಳ ವಿವರಣೆ ಈ ಉಪನ್ಯಾಸದಲ್ಲಿದೆ.
06/10 ಜಗತ್ತಿನ ಸಮ್ರಾಜ್ಞೀ
ಸರ್ವಸ್ವಾಮಿನಿಯಾಗಿ ಶ್ರೀಹರಿಯ ಮಹಾರಾಣಿಯಾಗಿರುವ ಭೂರೂಪದಿಂದ ರಾಷ್ಟ್ರದಲ್ಲಿ ವ್ಯಾಪಿಸಿನಿಂತಿರುವ ಸಾಧನೆಗೆ ಬೇಕಾದ ಸಕಲ ಪದಾರ್ಥಗಳನ್ನು ಸಾಧಕರಿಗೆ ಹೊಂದಿಸಿನೀಡುವ ಅನಾದಿಕಾಲದಿಂದ ಸಮಸ್ತ ದೇಶ ಕಾಲಗಳಲ್ಲಿ ವ್ಯಾಪ್ತರಾದ ಸಮಸ್ತಜಗತ್ತನ್ನು ಸೃಷ್ಟಿ ಮಾಡುವ ಯಜ್ಞಕ್ಕೆ ಬೇಕಾದ ಪದಾರ್ಥಗಳನ್ನು ಮೊದಲಿಗೆ ಸೃಷ್ಟಿ ಮಾಡುವ ದೇವತೆಗಳಿಂದ ಸಂಪ್ರಾರ್ಥಿತರಾಗಿ ಅನೇಕ ಕ್ಷೇತ್ರಗಳಲ್ಲಿ ನೆಲೆಸಿರುವ ಸಾಧಕರಿಗೆ ಬೇಕಾದ ಎಲ್ಲವನ್ನೂ ಕರುಣಿಸುವ ಮಹಾಲಕ್ಷ್ಮಿಯ ಕಾರುಣ್ಯ ಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ.
05/10 ಲಕ್ಷ್ಮೀದೇವಿ ಯಾರಿಗೆ ಸಂಪತ್ತನ್ನು ನೀಡುತ್ತಾರೆ?
ಲಕ್ಷ್ಮೀದೇವಿಯ ಅನುಗ್ರಹ ನಮ್ಮ ಮೇಲಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ತಾನು ಯಾರ ಮೇಲೆ ಅನುಗ್ರಹ ಮಾಡುತ್ತೇನೆ ಎಂದು ಸ್ವಯಂ ಮಹಾಲಕ್ಷ್ಮೀದೇವಿಯೇ ಹೇಳಿರುವ ಮಾತಿನ ವಿವರಣೆ ಇಲ್ಲಿದೆ.
04/10 ಲಕ್ಷ್ಮಿಯ ಸರ್ವಾಶ್ರಯತ್ವ
ಬೃಹದಾರಣ್ಯಕೋಪನಿಷತ್ತಿನ ಯಾಜ್ಞವಲ್ಕ್ಯ ಮತ್ತು ಗಾರ್ಗಿಯರ ಪ್ರಶ್ನೋತ್ತರದಲ್ಲಿ — ಅಕ್ಷರಬ್ರಾಹ್ಮಣದಲ್ಲಿ — ಪ್ರತಿಪಾದಿತವಾದ ಲಕ್ಷ್ಮೀದೇವಿಯ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ ಲಕ್ಷ್ಮೀದೇವಿಯರು ಸಮಸ್ತ ಚೇತನ-ಅಚೇತನಪ್ರಪಂಚಕ್ಕೆ ಆಧಾರರಾಗಿದ್ದಾರೆ ಎಂಬ ತತ್ವ ಇಲ್ಲಿ ನಿರೂಪಿತವಾಗಿದೆ. ಶ್ರೀಮದ್ವಾದಿರಾಜರ, ಶ್ರೀ ರಾಮಚಂದ್ರತೀರ್ಥಗುರುರಾಜರ, ಶ್ರೀಮನ್ ಮಂತ್ರಾಲಯಪ್ರಭುಗಳ ವ್ಯಾಖ್ಯಾನಗಳಲ್ಲಿನ ಅಪೂರ್ವ ವಿಶೇಷಗಳ ನಿರೂಪಣೆಯೊಂದಿಗೆ.
03/10 ಮಹಾಲಕ್ಷ್ಮೀ ವೈಭವ
ಸಮಸ್ತ ದೇವತಾಸಮುದಾಯದಿಂದ ಸಂಸೇವ್ಯಮಾನರಾದವರು ಶ್ರೀ ಮಹಾಲಕ್ಷ್ಮೀದೇವಿಯರು, ಮತ್ತು ಸಮಸ್ತ ದೇವತೆಗಳಿಗೂ ವಿಜಯಪ್ರದರು ಎಂಬ ಅವರ ಮಹಾಮಹಾತ್ಮ್ಯದ ಚಿಂತನೆ ಇಲ್ಲಿದೆ.
02/10 ಅಂಭೃಣೀಸೂಕ್ತದ ಋಷಿ ದೇವತೆ ಛಂದಸ್ಸು
ಅಂಭೃಣೀ ಸೂಕ್ತದ ದ್ರಷ್ಟಾರರಾದ ಋಷಿ ಯಾರು, ಪ್ರತಿಪಾದ್ಯದೇವತೆ ಯಾರು, ಛಂದಸ್ಸುಗಳು ಯಾವುವು ಮತ್ತು ಅಂಭೃಣೀ ಸೂಕ್ತದ ಪಠಣ-ಪಾಠಣ ಶ್ರವಣ ಅಧ್ಯಯನ ಅಧ್ಯಾಪನಗಳಿಂದ ದೊರೆಯುವ ಫಲಗಳ ಕುರಿತ ವಿವರಣೆ ಇಲ್ಲಿದೆ.
01/10 ಅಂಭೃಣೀಶಬ್ದದ ಚರ್ಚೆ
ಅಂಭೃಣಿ, ಅಂಭ್ರಣಿ, ಆಂಭ್ರಣಿ ಶಬ್ದಗಳು ತಪ್ಪುಶಬ್ದಗಳೆಂದೂ, ಅಂಭ್ರಿಣೀ ಎಂಬ ಶಬ್ದವೇ ಸರಿಯಾದ ಶಬ್ದವೆಂದೂ ಬನ್ನಂಜೆ ತನ್ನ ಪುಸ್ತಕಗಳಲ್ಲಿ ಬರೆದುಕೊಂಡಿದ್ದಾರೆ. ಆದರೆ ಅಂಭ್ರಿಣೀ ಎಂಬ ಶಬ್ದವಿದೆ ಎನ್ನುವದಕ್ಕೆಯಾವ ಆಧಾರವೂ ಇಲ್ಲ ಮತ್ತು ಬನ್ನಂಜೆ ಹೇಳುವ ಅರ್ಥವೂ ಸಹ ವ್ಯಾಕರಣಕ್ಕೆ ವಿರುದ್ಧ ಎಂದು ಇಲ್ಲಿ ಪ್ರತಿಪಾದಿಸಿ ಶ್ರೀವಾದಿರಾಜಗುರುಸಾರ್ವಭೌಮರೇ ಮುಂತಾದ ಮಹನೀಯರು ತಿಳಿಸಿರುವ ಅಂಭೃಣೀ ಎಂಬ ಶಬ್ದದ ಅರ್ಥವನ್ನು ಇಲ್ಲಿ ವಿವರಿಸಲಾಗಿದೆ. ಇದರ ಲೇಖನ — VNA247